ಹಿಮಾಚಲ ಪ್ರದೇಶ: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ
ಶಿಮ್ಲಾ ಡಿ.8 : ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ 37 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಬಿಜೆಪಿ 28ರಲ್ಲಿ ಮುನ್ನಡೆಯಲ್ಲಿದೆ. ಮೂವರು ಪಕ್ಷೇತರರು ಮುಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಮಾರು ನಾಲ್ಕು ದಶಕಗಳಿಂದ ಈ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸರಕಾರ ಬದಲಾಗುತ್ತಾ ಬಂದಿದೆ. ಹಿಮಾಚಲ ಜನತೆ ಎರಡೂ ಪಕ್ಷಗಳಿಗೆ ಸತತ ಎರಡನೇ ಅವಧಿಯನ್ನು ನಿರಾಕರಿಸುತ್ತಾ ಬಂದಿದ್ದಾರೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿದರೆ ಹಿಮಾಚಲ ರಾಜ್ಯವು ಅಧಿಕಾರದಲ್ಲಿರುವ ಸರಕಾರದ ವಿರುದ್ಧ ಮತ ಹಾಕುವ ಸಂಪ್ರದಾಯಕ್ಕೆ ಅಂಟಿಕೊಂಡಂತಾಗುತ್ತದೆ.
ಪಕ್ಷೇತರರಾಗಿ ಸ್ಪರ್ಧಿಸಿರುವ ಐವರು ಮುನ್ನಡೆಯಲ್ಲಿದ್ದು, ಈ ಪಕ್ಷೇತರರಲ್ಲಿ ಮೂವರು ಬಿಜೆಪಿ ಬಂಡಾಯಗಾರರಾಗಿದ್ದಾರೆ. 68 ಸದಸ್ಯರ ಸದನದಲ್ಲಿ ಯಾವುದೇ ಪಕ್ಷವು 35 ರ ಬಹುಮತದ ಅಂಕವನ್ನು ಮುಟ್ಟದಿದ್ದರೆ ಪಕ್ಷೇತರರ ಪಾತ್ರ ಮುಖ್ಯವಾಗುತ್ತದೆ. ಆದ್ದರಿಂದ ಬಿಜೆಪಿಯು ಬಂಡಾಯ ನಾಯಕರ ಸಂಪರ್ಕ ಸಾಧಿಸಲು ಆರಂಭಿಸಿದೆ ಎನ್ನಲಾಗಿದೆ.
ಫಲಿತಾಂಶವು ಅತಂತ್ರವಾದರೆ, ಬಿಜೆಪಿಯಿಂದ ಕುದುರೆ ವ್ಯಾಪಾರ ತಡೆಯಲು ಪಕ್ಷವು ತನ್ನ ಶಾಸಕರನ್ನು ತನ್ನ ಆಡಳಿತವಿರುವ ಛತ್ತೀಸ್‍ಗಢಕ್ಕೆ ಬದಲಾಯಿಸಬಹುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.