ತ್ರಿವಳಿ ಜಿಲ್ಲೆಗಳಲ್ಲಿ ಮತ್ತೆ ಆರಂಭವಾಗಲಿದೆ ಕಂಬಳ
ಮಂಗಳೂರು(ಉಡುಪಿ ಟೈಮ್ಸ್ ವರದಿ): ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯು ಜನವರಿ ತಿಂಗಳ ಕೊನೆಯ ವಾರದಿಂದ ಫೆಬ್ರವರಿಯಲ್ಲಿ ಕಂಬಳ ಆಯೋಜಿಸಲು ತೀರ್ಮಾನಿಸಿದೆ.
ಮೂಡಬಿದಿರೆಯ ಸಮಾಜ ಮಂದಿರದಲ್ಲಿ ಶನಿವಾರ ಸಮಿತಿಯ ಅಧ್ಯಕ್ಷ ಕೂಳೂರು ಪೊಯ್ಯೇಲು ಪಿ.ಆರ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ವಾರ್ಷಿಕ ಮಹಾಸಭೆ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.
ಕೊರೋನ ಹಿನ್ನೆಲೆಯಲ್ಲಿ ಸರಕಾರದ ಕಾನೂನಿನ ಎಲ್ಲ ಮಾರ್ಗಸೂಚಿ ಮಾಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಆಯಾ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿ ಅವರ ಸೂಚನೆಯಂತೆ ನಡೆಯಲಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿ, ಕಾರ್ಯದರ್ಶಿ ವಿದ್ಯಾಧರ್ ಜೈನ್ ರೆಂಜಾಳ, ಮಾಜಿ ಅಧ್ಯಕ್ಷ ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್, ಪ್ರಮುಖರಾದ ಬೆಳುವಾಯಿ ಸದಾನಂದ ಶೆಟ್ಟಿ, ಮಾಳ ದಿನೇಶ್ ಶೆಟ್ಟಿ, ಎರ್ಮಾಳು ರೋಹಿತ್ ಹೆಗ್ಡೆ, ಹೊಸಬೆಟ್ಟು ಚಂದ್ರಹಾಸ ಸಾಧು ಸನಿಲ್ ಉಪಸ್ಥಿತರಿದ್ದರು. ಮೂರೂ ಜಿಲ್ಲೆಗಳ, ಓಟದ ಕೋಣಗಳ ಯಜಮಾನರುಗಳು, ಕಂಬಳ ವ್ಯವಸ್ಥಾಪಕರುಗಳು, ತೀರ್ಪುಗಾರರು, ಓಟಗಾರರು, ಗಂತಿನಲ್ಲಿ ಕೋಣಗಳನ್ನು ನಿಯಂತ್ರಿಸುವವರು ಹಾಗೂ ಕಂಬಳ ಅಭಿಮಾನಿಗಳು ಭಾಗವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಂಬಳದಲ್ಲಿ ಭಾರೀ ಸಭೆ ಸೇರುವ ಹಿನ್ನೆಲೆಯಲ್ಲಿ ಸರಕಾರದ ನಿಯಮ ಪಾಲಿಸುವುದಕ್ಕಾಗಿ ಈ ಭಾರೀ ರಾತ್ರಿ ಕಂಬಳ ನಡೆಸಲಾಗುವುದಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಬದಲಾಗಿ ಶನಿವಾರ ಹಾಗೂ ಭಾನುವಾರ 2 ದಿನ ನಡೆಸಲು ನಿರ್ಧರಿಸಲಾಗಿದ್ದು, ಆಯಾ ದಿನನೇ ಆಯಾ ವಿಭಾಗದ ಫೈನಲ್ ಮುಗಿಸಲಾಗುವುದು. ಶನಿವಾರ ಹಗ್ಗ ಕಿರಿಯ-ಹಿರಿಯ, ಅಡ್ಡ ಹಲಗೆ, ಕನೆ ಹಲಗೆ ನಡೆಯಲಿದ್ದು, ಹಾಗೂ ಭಾನುವಾರ ನೇಗಿಲು ಹಿರಿಯ-ಕಿರಿಯ ಸ್ಪರ್ಧೆ ನಡೆಸಲಾಗಿವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.