ಮೀನುಗಾರರಿಗೆ ಸೀಮೆ ಎಣ್ಣೆಗೆ ಬಜೆಟ್ ನಲ್ಲಿಯೇ ಹಣ ಕಾಯ್ದಿರಿಸಬೇಕು- ಗೋಪಾಲ ಪೂಜಾರಿ

ಉಡುಪಿ ಡಿ.3 (ಉಡುಪಿ ಟೈಮ್ಸ್ ವರದಿ) : ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಸಮರ್ಪಕವಾಗಿ ವಿತರಿಸುವಂತೆ ಆಗ್ರಹಿಸಿ ಇಂದು ಕುಂದಾಪುರ ಹಾಗೂ ಬೈಂದೂರು ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಉಡುಪಿಯಲ್ಲಿ ಹಕ್ಕೋತ್ತಾಯ ಆಂದೋಲನವನ್ನು ನಡೆಸಲಾಯಿತು.

ಇದೇ ವೇಳೆ ಕೇಂದ್ರ ಸರಕಾರದಿಂದ ಬಿಡುಗಡೆಯಾದ ಸೀಮೆ ಎಣ್ಣೆ 15 ದಿನಗಳೊಳಗೆ ಸಿಗಬೇಕು. ಕೇಂದ್ರದಿಂದ ಸೀಮೆ ಎಣ್ಣೆ ನೀಡಲು ಸಮಸ್ಯೆ ಆದ ಸಂದರ್ಭದಲ್ಲಿ ಓಪನ್ ಮಾರ್ಕೇಟ್ ನಲ್ಲಿ ಬಿಳಿ ಸೀಮೆ ಎಣ್ಣೆ ಖರೀದಿಸಿ ಸಬ್ಸಿಡಿಯಲ್ಲಿ ನೀಡಿದರೆ ಮೀನುಗಾರನಿಗೆ ನಿರಂತರ ಮೀನುಗರಿಕೆ ನಡೆಸಲು ತೊಂದರೆ ಆಗುವುದಿಲ್ಲ. ನಷ್ಟ ಪರಿಹಾರದ ಹಣವನ್ನು ನಿಗದಿಪಡಿಸಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಗೋಪಾಲ ಪೂಜಾರಿ ಅವರು ಮಾತನಾಡಿ, ನಮಗೆ ಪೆಟ್ರೋಲ್ ಅಗತ್ಯ ಇಲ್ಲ. ನಮಗೆ ಸಿಗಬೇಕಾಗಿರುವ ಸೀಮೆ ಎಣೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿಯಾಗಿ ನೀಡುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದನ್ನು ಆಂದೋಲನದ ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸರಕಾರದ ವತಿಯಿಂದ ಬಿಳಿ ಸೀಮೆ ಎಣ್ಣೆ ನೀಡಿದರೆ ಪರವಾಗಿಲ್ಲ. ಆದರೆ ಖಾಸಗಿಯವರಿಂದ ಖರೀದಿಸಿದ ಸೀಮೆ ಎಣ್ಣೆಯಿಂದ ದೋಣಿಯ ಯಂತ್ರಗಳು, ಮೋಟಾರ್ ಗಳು ಹಾಳಾಗುತ್ತದೆ ಆದ್ದರಿಂದ ಅದು ಬೇಡ ಎಂದು ಮೀನುಗಾರರು ಹೇಳುತ್ತಾರೆ. ಆದ್ದರಿಂದ ಒಂದು ವೇಳೆ ಸರಕಾರ ಸೀಮೆ ಎಣ್ಣೆ ಕೊಡಿಸುವ ಕೆಲಸ ಮಾಡಿದರೆ ಇದರಿಂದ ಬೋಟ್ ನ ಯಂತ್ರಗಳು ಹಾಳಾದರೆ ಇದಕ್ಕೆ ಹೊಣೆ ಸರಕಾರ ಹೊರುತ್ತಾ ಅಥವಾ ಸರಕಾರ ಏನು ಮಾಡುತ್ತದೆ ಎಂಬುದನ್ನು ನೇರವಾಗಿ ಹೇಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ನಾವು ಕೇಳುತ್ತಿರುವ ಸೀಮೆ ಎಣ್ಣೆಗೆ ಬಜೆಟ್ ನಲ್ಲಿಯೇ ಹಣ ಕಾಯ್ದಿರಿಸುವ ಮೂಲಕ ಮೀನುಗಾರರಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸ ಆಗಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.

ಈ ವೇಳೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಮಾತನಾಡಿ, ಜನಪ್ರತಿನಿಧಿಗಳು ಬರೇ ಸೀಮೆ ಎಣ್ಣೆ ಬಿಡುಗಡೆ ಆಗುತ್ತದೆ ಎಂದು ಹೇಳುತ್ತಾರೆ ಮಾತ್ರ. ಆದರೆ ಇನ್ನೂ ಬಂದಿಲ್ಲ. ಅದೇ ರೀತಿ ಪಡಿತರ ಚೀಟಿ ಯವರಿಗೆ ಕುಚ್ಚಿಲಕ್ಕಿ ಕೊಡುತ್ತೇವೆ ಎಂದು ಹೇಳಿ ಹೇಳಿ ಒಂದು ವರ್ಷವಾಗುತ್ತಾ ಬಂತು ಆದರೆ ಇನ್ನೂ ಕುಚ್ಚಿಲಕ್ಕಿ ಬಂದಿಲ್ಲ. ಇಂದು ಜನಪ್ರತಿನಿಧಿಗಳು ಬರೇ ಪತ್ರಕೆಯಲ್ಲಿ ಹೇಳಿಕೆ ನೀಡುವ ಪರಿಸ್ಥಿತಿ ಕಾಣುತ್ತಿದ್ದೇವೆ ಎಂದರು.

ಕಳೆದ ಬಾರಿ ಮುಖ್ಯಮಂತ್ರಿ ಯವರು ಬಂದಾಗ ಸೀಮೆ ಎಣ್ಣೆ ನೀಡುವ ಭರವಸೆ ನೀಡಿದರು ಆದರೆ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇಂದು ಮೀನುಗಾರರಿಗೆ ಸೀಮೆ ಎಣ್ಣೆ ಸಿಗದಿದ್ದರೆ ಯಾವ ರೀತಿ ಅವರು ಮೀನುಗಾರಿಕೆ ವೃತ್ತಿಯನ್ನು ಮಾಡಲು ಆಗುತ್ತದೆ ಎಂದು ಪ್ರಶ್ನಿಸಿದರು.

ಹಾಗೂ ನಮ್ಮ ಜಿಲ್ಲೆಯಲ್ಲಿ ಕೃಷಿಯಂತೆ ಮೀನುಗಾರಿಕೆ ಕೂಡಾ ಪ್ರಧಾನ ವೃತ್ತಿ. ಕರಾವಳಿಯ ಮೂರು ಜಿಲ್ಲೆಗಳನ್ನು ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕೆ ಪ್ರಧಾನವಾದ ಪಾತ್ರ ಪಡೆದಿದೆ. ಮೀನುಗಾರಿಕೆಯಿಂದಾಗಿ ಆರ್ಥಿಕತೆಗೆ ಸಹಕಾರಿಯಾಗಿದ್ದು, ಮೀನುಗಾರಿಕೆಯಿಂದ ಇಷ್ಟೋಂದು ಲಾಭ ಸರಕಾರಕ್ಕೆ ಇರುವುದಾಗ ಸಬ್ಸಿಡಿಯಲ್ಲಿ ಸೀಮೆ ಎಣ್ಣೆ ಬಿಡುಗಡೆ ಮಾಡಲು ಆಗುವುದಿಲ್ಲ ಎಂದಾದರೆ ಮೀನುಗಾರರು ವೃತ್ತಿ ಮಾಡುವುದಾದರೂ ಹೇಗೆ ಎಂದು ಕೇಳಿದ್ದಾರೆ.

ಸೀಮೆ ಎಣ್ಣೆ ಬಿಡುಗಡೆ ಆದರೂ ಕೇವಲ 50-60 ಶೇ. ದಷ್ಟು ಮಾತ್ರ ಸಬ್ಸಿಡಿಯಲ್ಲಿ ನೀಡಲಾಗುತ್ತದೆ. ಬಾಕೀ ಉಳಿದದ್ದು ಕಾಳಸಂತೆಯಲ್ಲಿ ಮಾರಾಟ ಆಗುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಧಿಷ್ಟವಾಗಿ ಮೀನುಗಾರರಿಗೆ ಡೀಸೆಲ್, ಸೀಮೆ ಎಣ್ಣೆಗೆ ಸಬ್ಸಿಡಿ ನೀಡುವಂತಹದ್ದು, ಹಾಗೂ ಮೀನುಗಾರರಿಗೆ ಆಧಾರವಾಗುವ ಕಾರ್ಯ ಮಾಡಿದ್ದು ಸಿದ್ದರಾಮಯ್ಯನವರ ಸರಕಾರ ಎಂದು ಅವರು ಇದೇ ವೇಳೆ ಹೇಳಿದರು.

Leave a Reply

Your email address will not be published. Required fields are marked *

error: Content is protected !!