ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಪ್ರಶಸ್ತಿ ಗರಿ

ಮಣಿಪಾಲ, ಡಿ.2 (ಉಡುಪಿ ಟೈಮ್ಸ್ ವರದಿ): ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ ಎಕನಾಮಿಕ್ ಟೈಮ್ಸ್ ಅವರಿಂದ ಮೂಳೆ ಮತ್ತು ಕೀಲಿನ ವಿಭಾಗ (ದಕ್ಷಿಣ) 2022 ಅತ್ಯುತ್ತಮ ಆಸ್ಪತ್ರೆ ಎಂಬ ಪ್ರಶಸ್ತಿ ಲಭಿಸಿದೆ.

ಮಣಿಪಾಲದ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಾಹೆಯ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯ-ನಿರ್ವಾಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಮತ್ತು ಮೂಳೆ ಮತ್ತು ಕೀಲಿನ ವಿಭಾಗದ ಮುಖ್ಯಸ್ಥ ಡಾ.ಶ್ಯಾಮಸುಂದರ್ ಭಟ್ ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಈ ವೇಳೆ ಮಣಿಪಾಲದ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರು, ಮಾತನಾಡಿ, ಮಣಿಪಾಲದ ಕಸುರ್ಬಾ ಆಸ್ಪತ್ರೆಯು ಉತ್ತಮ ಪ್ರತಿಭೆಯನ್ನು ಗುರುತಿಸಿ ಅವರನ್ನು ಬೆಳೆಸುವ ಮೂಲಕ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಲು ಸದಾ ಪ್ರಯತ್ನಿಸುತ್ತದೆ. 1990 ರಿಂದ ಭಾರತದಾದ್ಯಂತ ಬಹಳ ಪ್ರಸಿದ್ಧವಾದ ಮೂಳೆ ಮತ್ತು ಕೀಲಿನ ವಿಭಾಗ ಇದಕ್ಕೆ ಉದಾಹರಣೆಯಾಗಿದೆ. ವಿಭಾಗವು ಉಪ-ವಿಶೇಷತೆಯನ್ನು ರಚಿಸಿಕೊಂಡಿದೆ ಮತ್ತು ಪ್ರತಿ ಘಟಕವು ಬೆನ್ನುಮೂಳೆ, ಭುಜ, ಮೊಣಕಾಲು, ಕೈ, ಮಕ್ಕಳ ಮೂಳೆ ಮತ್ತು ಕೀಲಿನ, ಕ್ರೀಡಾ ಗಾಯ, ಕಾಲು ಮತ್ತು ಪಾದದ ಚಿಕಿತ್ಸೆಯಲ್ಲಿ ಪರಿಣತಿಯನ್ನು ಹೊಂದಿದೆ ಎಂದು ತಿಳಿಸಿದರು.

ಇದೇ ವೇಳೆ ಕೆಎಂಸಿ ಮಣಿಪಾಲದ ಡೀನ್, ಮೂಳೆ ಶಸ್ತ್ರಚಿಕಿತ್ಸಕ ಡಾ ಶರತ್ ಕೆ ರಾವ್ ಅವರು ಮಾತನಾಡಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಮತ್ತು ಮೂಳೆಚಿಕಿತ್ಸಾ ವಿಭಾಗವು ಎಕನಾಮಿಕ್ ಟೈಮ್ಸ್‍ನಿಂದ ಇಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವುದು ಒಂದು ಅತ್ಯುತ್ತಮ ಸಾಧನೆಯಾಗಿದೆ. ಇದು ನಾವು ಹೆಚ್ಚು ಜವಾಬ್ದಾರರಾಗಿ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಲು ಹುರಿದುಂಬಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಹೆಯ ಮುಖ್ಯ ಕಾರ್ಯ-ನಿರ್ವಾಹಣಾಧಿಕಾರಿ ಸಿ.ಜಿ ಮುತ್ತಣ್ಣ, ಆರ್ಥೋಪೆಡಿಕ್ಸ್ ವಿಭಾಗದ ಎಲ್ಲಾ ಘಟಕದ ಮುಖ್ಯಸ್ಥರು ಮತ್ತು ಆಸ್ಪತ್ರೆಯ ಇತರ ನಿರ್ವಹಣಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!