ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಬಾಗಿಲು ಹಾಕಿಕೊಂಡ ಮಗ, ಅಗ್ನಿಶಾಮಕ ದಳ ದೌಡು
ಮಣಿಪಾಲ: ತಾಯಿ ಮೊಬೈಲ್ ಕಿತ್ತುಕೊಂಡಿದ್ದರೆಂಬ ಕಾರಣಕ್ಕೆ ಯುವಕನೋರ್ವ ಮನೆಯ ಬಾತ್ ರೂಮ್ ನಲ್ಲಿ ಬಾಗಿಲು ಹಾಕಿ ಗಂಟೆಗಟ್ಟಲೆ ಕುಳಿತುಕೊಂಡು ಅವಾಂತರ ಸೃಷ್ಟಿಸಿದ ಘಟನೆ ಮಣಿಪಾಲದ ಅಪಾರ್ಟ್ಮೆಂಟ್ ವೊಂದರ ನಾಲ್ಕನೇ ಮಹಡಿಯಲ್ಲಿ ನಡೆದಿದೆ.
ರಾತ್ರಿಯಿಡಿ ಮೊಬೈಲ್ ನಲ್ಲಿ ಆಟವಾಡುತ್ತಿದ್ದ ಮಗನಿಗೆ ಗದರಿಸಿದ ತಾಯಿಯು ಮಗನಿಂದ ಮೊಬೈಲ್ ಕಿತ್ತುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಮಗ ಮನೆಯ ಬಾತ್ ರೂಮ್ ನಲ್ಲಿ ಬಾಗಿಲು ಹಾಕಿಕೊಂಡು ಗಂಟೆ ಗಟ್ಟಲೆ ಕೂತುಬಿಟ್ಟದ್ದ. ತಾಯಿ ಅದೆಷ್ಟು ಬಾರಿ ಕರೆದರೂ ಮಗ ಬಾಗಿಲು ತೆರೆಯದಾಗ, ಆತಂಕ ಗೊಂಡ ತಾಯಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕೂಡಲೆ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ತಂಡ ಹಗ್ಗದ ಸಹಾಯದಿಂದ ನಾಲ್ಕನೆ ಮಹಡಿಗೆ ಇಳಿದು ಬಾತ್ ರೂಮ್ ನ ಕಿಟಕಿ ಮುರಿದು ಒಳ ಪ್ರವೇಶಿಸಿದ್ದಾರೆ. ಈ ವೇಳೆ ಬಾತ್ ರೂಮ್ ನಲ್ಲಿ ಮಾನಸಿಕವಾಗಿ ನೊಂದಿದ್ದ ಯುವಕ ಅರೆಪ್ರಜ್ಞಾ ಅವಸ್ಥೆಯಲ್ಲಿ ಕಂಡುಬಂದಿದ್ದು. ಇದೀಗ ಯುವಕನನ್ನು ರಕ್ಷಣೆ ಮಾಡಿ ಸಮಾಧಾನ ಪಡಿಸಿದ್ದಾರೆ. ಜೊತೆಗೆ ಪ್ರಾಣದ ಹಂಗು ತೊರೆದು ಯುವಕನನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಅಗ್ನಿ ಶಾಮಕ ದಳದ ಸಿಬ್ಬಂದಿ ಗಳ ಕಾರ್ಯ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ವಸಂತ್ ಕುಮಾರ್, ಅಶ್ವಿನ್ ಸನೀಲ್, ಸುಧಾಕರ್ ದೇವಾಡಿಗ, ರವಿ ನಾಯಕ್, ಚಾಲಕ ಆಲ್ವಿನ್ ಪ್ರಶಾಂತ್, ಗೃಹ ರಕ್ಷದ ಪ್ರಭಾಕರ ದಾವುದ್ , ಹಕೀಮ್ ಪಾಲ್ಗೊಂಡಿದ್ದರು.