ಉಡುಪಿ: ಪುತ್ತಿಗೆ ಮಠದ ಪರ್ಯಾಯ ಪ್ರಯುಕ್ತ ಬಾಳೆ ಮುಹೂರ್ತ ಸಂಪನ್ನ

ಉಡುಪಿ ಡಿ.2: 2024 ರಲ್ಲಿ ನಡೆಯಲಿರುವ ಪುತ್ತಿಗೆ ಮಠದ ಪರ್ಯಾಯದ ಪ್ರಯುಕ್ತ ಇಂದು ಮಠದಲ್ಲಿ ಪ್ರಥಮ ಮುಹೂರ್ತವಾದ ಬಾಳೆ ಮುಹೂರ್ತ ಸಂಪನ್ನಗೊಂಡಿತು.

ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಪ್ರಥಮ ಮುಹೂರ್ತ ಬಾಳೆಮುಹೂರ್ತಕ್ಕೆ ಉಡುಪಿ ಪುತ್ತಿಗೆ ಮಠದಲ್ಲಿ ಚಾಲನೆ ನೀಡಲಾಯಿತು.

ಇಂದು ಬೆಳಿಗ್ಗೆ 8.20ರ ಧನುರ್ಲಗ್ನ ಸುಮುಹೂರ್ತದಲ್ಲಿ ಪುತ್ತಿಗೆ ಶ್ರೀಮಠದ ಆವರಣದಲ್ಲಿ ಬಾಳೆ ಮುಹೂರ್ತ ಕಾರ್ಯಕ್ರಮ ನಡೆಯಿತು. ರಥಬೀದಿಯಲ್ಲಿ ಭಕ್ತರು ಬಾಳೆಗಿಡಗಳನ್ನು ಹೊತ್ತು ಮರೆವಣಿಗೆಯಲ್ಲಿ ಸಾಗಿ ಕೃಷ್ಣ ಮುಖ್ಯಪ್ರಾಣನ ಜೊತೆಗೆ ಅನಂತೇಶ್ವರ, ಚಂದ್ರ ಮೌಳೀಶ್ವರ ಸನ್ನಿಧಾನದಲ್ಲಿ ವಿಶೇಷ ಪೂಜೆ ನಡೆಸುವ ಮೂಲಕ ಬಾಳೆ ಮೂಹೂರ್ತಕ್ಕೆ ಚಾಲನೆ ನೀಡಲಾಯಿತು. ಹಾಗೂ ದೇವರ ಪ್ರಸಾದದೊಂದಿಗೆ ಪುತ್ತಿಗೆ ಮಠಕ್ಕೆ ಆಗಮಿಸಿ ವಾದ್ಯ-ವೇದ-ಮಂಗಳ ಘೋಷಗಳೊಂದಿಗೆ ಬಾಳೆಗಿಡ, ತುಳಸೀ ಗಿಡ, ಕಬ್ಬು ಮೊದಲಾದ ಸಸ್ಯ ಸಂಪತ್ತನ್ನು ಮೆರವಣಿಗೆಯ ಮೂಲಕ ನಿಗದಿತ ಸ್ಥಳಕ್ಕೆ ಕೊಂಡೊಯ್ದು ಬಾಳೆ ಗಿಡಗಳನ್ನು ನೆಡಲಾಯಿತು. ಹೀಗೆ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅನ್ನದಾನಕ್ಕೆ ಬೇಕಾಗುವ ಬಾಳೆ ಎಲೆಗಾಗಿ ಗಿಡಗಳನ್ನು, ಅರ್ಚನೆಗಾಗಿ ತುಳಸೀ ಗಿಡಗಳನ್ನು ನೆಡುವ ಮೂಲಕ ಮೊದಲ ಮುಹೂರ್ತ ಸಂಪನ್ನಗೊಂಡಿತು.

ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಪುತ್ತಿಗೆ ಮಠಾದೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಕೃಷ್ಣ ಆರಾಧನೆ ಎಲ್ಲರೂ ಸೇರಿ ಮಾಡಬೇಕು. ಆ ಮೂಲಕ ಮಳೆ ಬೆಳೆ ಆಗಿ, ಎಲ್ಲರೂ ಸಮೃದ್ಧಿಯಿಂದ ಬದುಕಬೇಕು. ದೇವರನ್ನು ಯಾವ ರೀತಿ ಪೂಜೆ ಮಾಡುತ್ತೇವೆ. ಅದೇ ರೀತಿಯ ಅನುಗ್ರಹ ಸಿಗುತ್ತದೆ. ದೇವರನ್ನು ಅನ್ನಬ್ರಹ್ಮ, ಕಾಂಚಾನ ಬ್ರಹ್ಮ, ನಾದಬ್ರಹ್ಮ ಉಪಾಸನ ಮಾಡಬೇಕು. ಉಡುಪಿ ಶ್ರೀಕೃಷ್ಣನನ್ನು ಅನ್ನಬ್ರಹ್ಮ ಮೂಲಕ ಉಪಾಸನ ಮಾಡಿದರೆ, ಲೋಕವೇ ಸುಭಿಕ್ಷೆಯಿಂದ ಇರುತ್ತದೆ. ಉಡುಪಿ ಶ್ರೀಕೃಷ್ಣ ತಿನ್ನುವ ಕೃಷ್ಣನಾಗಿ ಒಳಿದಿದ್ದು, ಹಾಗಾಗಿ ಉಡುಪಿಯಲ್ಲಿ ಅನ್ನದಾನ ಎಂಬುವುದು ವಿಶೇಷ ಸೇವೆ. ಅದರ ಪ್ರತ್ಯಕ್ಷ ದರ್ಶನ ಉಡುಪಿಯ ಹೋಟೆಲ್ ಗಳು ಎಂದರು.

ಮೊಬೈಲ್ ಒತ್ತಡ ಸೃಷ್ಟಿಸುವ ಸಾಧನ. ಹತ್ತಿರ ಇದ್ದರೂ ದೂರ ಇದ್ದರೂ ಟೆನ್ಶನ್ ಟೆನ್ಶನ್ ಹೆಚ್ಚಾಗುತ್ತಿದೆ. ಇದರ ನಿವಾರಣೆಗೆ ಕೋಟಿ ಗೀತಾ ಗಾಯನ ಆರಂಭಿಸಿದ್ದೇವೆ. ವಿಶ್ವಗೀತಾ ಪರ್ಯಾಯ, ಅನ್ನಬ್ರಹ್ಮ ಸೇವೆ ಅನ್ನದಾನ ಹಾಗೂ ಜ್ಞಾನದಾನ ಮೂಲಕ ನಡೆಯಬೇಕು. ಕ್ಷೇತ್ರಾವಾಸ…ನೂರಾರು ಕೋಣೆ ವಸತಿ ಗೃಹ ನಿರ್ಮಾಣ ಸುವರ್ಣ ಮಹೋತ್ಸವದ ಅಂಗವಾಗಿ ಚಿನ್ನದ ರಥ ಸಮರ್ಪಣೆ, ಪಾರ್ಥಸಾರಥಿ ರಥ ಸಮರ್ಪಣೆ, ಕಲ್ಸಂಕದಲ್ಲಿ ಮಧ್ವವೃತ್ತ ನಿರ್ಮಾಣ ಹಾಗೂ ಸಮಗ್ರಗೀತೆಯ ಯಾಗ ನಡೆಯಲಿದೆ ಎಂದು ತಿಳಿಸಿದರು. ಹಾಗೂ ಮೇ 25 ರಂದು ಅಕ್ಕಿ ಮುಹೂರ್ತ ನಡೆಯಲಿದ್ದು, ಜ.3 ರಂದು ಪುರಪ್ರವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ್,ಕೆ.ಉದಯ್ ಕುಮಾರ್ ಶೆಟ್ಟಿ, ಸಂತೋಷ್ ಪಿ.ಶೆಟ್ಟಿ, ಎಂ.ಬಿ. ಪುರಾಣಿಕ್, ಗುರ್ಮೆ ಸುರೇಶ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ಸುಮಿತ್ರಾ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ಪುರುಷೋತ್ತಮ ಶೆಟ್ಟಿ ಅವರು ಹಾಗೂ ಭಕ್ತರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!