ಉಡುಪಿ: ವೃದ್ಧೆಯ ಅಪಹರಣಗೈದು ಅತ್ಯಾಚಾರ ಪ್ರಕರಣ- ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಉಡುಪಿ ಡಿ.1 (ಉಡುಪಿ ಟೈಮ್ಸ್ ವರದಿ) : ನಗರದ ದೇವಸ್ಥಾನವೊಂದರ ಸಮೀಪ ವೃದ್ದೆಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಆಕೆಯ ಬಳಿ ಇದ್ದ ನಗ-ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 55 ಸಾವಿರ ದಂಡ ವಿಧಿಸಿ ಉಡುಪಿ ಜಿಲ್ಲಾ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯದ ತೀರ್ಪು ನೀಡಿದೆ.

ಶಿವಮೊಗ್ಗದ ಜೆಪಿ ನಗರ ನಿವಾಸಿ ಇರ್ಫಾನ್ (30) ಪ್ರಕರಣದ ಅಪರಾಧಿ. ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ 2 ನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ಅವರು ಆರೋಪಿಗೆ ಸೆಕ್ಷನ್ 376 ರ ಅನ್ವಯ 10 ವರ್ಷ ಕಠಿಣ ಶಿಕ್ಷೆ, 50,000 ದಂಡ ಹಾಗೂ ಸೆಕ್ಷನ್ 506 ರಂತೆ 6 ತಿಂಗಳ ಸಾಮಾನ್ಯ ಶಿಕ್ಷೆ ಮತ್ತು 5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಿಚಾರಣೆ ವೇಳೆ ಸರಕಾರಿ ಅಭಿಯೋಜಕರಾದ ಜಯರಾಂ ಶೆಟ್ಟಿ ಅವರು ಮಹಿಳೆಯ ಪರವಾಗಿ ವಾದವನ್ನು ಮಂಡಿಸಿದ್ದರು.

2017ರ ಜೂ.5 ರಂದು ಉಡುಪಿ ಫಿಶ್ ಮಾರ್ಕೆಟ್ ಬಳಿಯ ಕೊಳಿ ಮಾಂಸ ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇರ್ಫಾನ್ ಉಡುಪಿ ಶ್ರೀಕೃಷ್ಣ ಮಠದ ಬಳಿ ಗುಜರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ 80 ವರ್ಷದ ವೃದ್ದೆಯನ್ನು ಹಿಂಬಾಲಿಸಿಕೊಂಡು ಹೋಗಿ ಆಕೆಯನ್ನು ಹೊತ್ತೊಯ್ದು ವೆಂಕಟರಮಣ ದೇವಸ್ಥಾನದ ಓಣಿಯೊಂದರಲ್ಲಿ ಅತ್ಯಾಚಾರ ಗೈದು, ಆಕೆಯ ಬಳಿ ಇದ್ದ 30,000 ನಗದು ಹಾಗೂ ಕಿವಿಯ ಬೆಂಡೋಲೆ ಮತ್ತು ತಾಳಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಅಲ್ಲದೆ ಆರೋಪಿ ಹೊಸ ಮೊಬೈಲ್ ವೊಂದನ್ನು ಖರೀದಿಸಿ ತಾನು ವಾಸಿಸುತ್ತಿದ್ದಲ್ಲಿಗೆ ಹೋಗಿದ್ದ. ಈ ವೇಳೆ ಅಂಗಡಿ ಮಾಲೀಕ ಈತನ ಬಳಿ ಇದ್ದ ಹಣದ ಬಗ್ಗೆ ವಿಚಾರಿಸಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.

ಇತ್ತ ಅಸ್ವಸ್ಥಗೊಂಡ ಮಹಿಳೆಯನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ನಡೆದು ಎರಡು ದಿನಗಳ ನಂತರ ಮಹಿಳೆ ಈ ಬಗ್ಗೆ ಉಡುಪಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಮಹಿಳೆ ಅಪರಿಚಿತ ವ್ಯಕ್ತಿ ಎಂದು ತಿಳಿಸಿದ್ದರು. ಆರೋಪಿಯ ಜಾಡು ಹಿಡುದು ಹೊರಟ ಗುಜರಿ ಅಂಗಡಿಯ ಮಾಲಕಿ ಜೆರಿನಾ ಎಂಬಾಕೆಯನ್ನು ವಿಚಾರಿಸಿದಾಗ ಆರೋಪಿಯ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಆರೋಪಿಯು ಜೆರಿನಾರ ಮಗನ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದೂ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

ಈ ನಡುವೆ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸರಿಗೆ ಆತ ಬೆಂಗಳೂರಿನ ಬ್ಯಾಟರಾಯನ ಪುರದ ಕೊಲೆ ಪ್ರಕರಣದ ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಳಿಕ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಮೇ.16 2019 ರಂದು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಯ ಕೃತ್ಯ ಬಯಲಾಗಿದೆ.

ಪ್ರಕರಣದ ವಿಚಾರಣೆಯನ್ನು ನಡೆಸಿದ ಅಂದಿನ ಪೊಲೀಸ್ ವೃತ್ತ ನಿರೀಕ್ಷ ಮಂಜುನಾಥ ಅವರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 18 ಸಾಕ್ಷಿಗಳ ಪೈಕಿ 15 ಸಾಕ್ಷಿಗಳ ಹೇಳಿಕೆ ಪಡೆದಿದ್ದು, ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿ ತೀರ್ಪು ನೀಡಿ ಆದೇಶಿಸಿದೆ.

Leave a Reply

Your email address will not be published. Required fields are marked *

error: Content is protected !!