ಉಡುಪಿ: ಡಿ.5-24 ರವರೆಗೆ 1-15 ವರ್ಷದ ಮಕ್ಕಳಿಗೆ ಜೆ.ಇ. ಲಸಿಕಾ ಕಾರ್ಯಕ್ರಮ

ಉಡುಪಿ ಡಿ.1 (ಉಡುಪಿ ಟೈಮ್ಸ್ ವರದಿ) : 1 ವರ್ಷದಿಂದ 15 ವರ್ಷದ ಎಲ್ಲಾ ಮಕ್ಕಳಿಗೆ ಡಿ.5 ರಿಂದ ಡಿ.24 ರವರೆಗೆ ಜೆ.ಇ(ಮೆದುಳು ಜ್ವರ) ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಗರಸಭೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಕಾರ್ಮಿಕ, ಅಲ್ಪಸಂಖ್ಯಾತರ ಇಲಾಖೆ, ರೋಟರಿ, ಲಯನ್ಸ್, ಐ.ಎಂ.ಎ, ಇವರ ಸಹಕಾರದಿಂದ ಜಿಲ್ಲಾ ಮಟ್ಟದ ಜೆ.ಇ ಲಸಿಕಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಡಿ. 5 ರಂದು ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಜರುಗಲಿದೆ. ಈ ಲಸಿಕಾ ಕಾರ್ಯಕ್ರಮವು ಡಿ.5 ರಿಂದ ಡಿ.11 ರವರೆಗೆ ಶಾಲೆಗಳಲ್ಲಿ ನಡೆಯಲಿದೆ. ಡಿ.12 ರಿಂದ ಡಿ.18 ರವರೆಗೆ ಎಲ್ಲಾ ಆಂಗನವಾಡಿ ಕೇಂದ್ರಗಳಲ್ಲಿ ನಡೆಯಲಿದೆ. ಹಾಗೂ ಡಿ.19 ರಿಂದ ಡಿ.24 ರ ವರೆಗೆ ಸಮುದಾಯ ಮಟ್ಟದಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ 1 ವರ್ಷದಿಂದ 15 ವರ್ಷದವರೆಗಿನ ಮಕ್ಕಳಿಗೆ ಲಸಿಕೆ ನೀಡಲು 2,18,324 ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ಜಿಲ್ಲೆಯ ಶಾಲೆ-1162, ಸಮುದಾಯ-551 ಹಾಗೂ ಎಚ್‍ಆರ್‍ಎ ಸೈಟ್ ನಲ್ಲಿ-209 ಸೇರಿ ಒಟ್ಟು 1922 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಹಾಗೂ ಕ್ಷೇತ್ರ ಮಟ್ಟದಲ್ಲಿ ಈ ಲಸಿಕಾ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಯವರು ಭಾಗವಹಿಸಿ ಕಾರ್ಯಕ್ರಮ ನಡೆಸಲಿದ್ದಾರೆ. ಮಕ್ಕಳು ಕಲಿಯುತ್ತಿರುವ ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ, ಆರೋಗ್ಯ ಸಂಸ್ಥೆಗಳಲ್ಲಿ ಹಾಗೂ ಸಮುದಾಯ ಮಟ್ಟದಲ್ಲಿ ಲಸಿಕಾ ಶಿಬಿರಗಳನ್ನು ಏರ್ಪಡಿಸಿ ಅರ್ಹ ಮಕ್ಕಳಿಗೆ ಜೆ.ಇ ಲಸಿಕೆ ನೀಡಲಾಗುವುದು. ಶಾಲೆಯಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ 1 ವರ್ಷದಿಂದ 15 ವರ್ಷದವರೆಗಿನ ಮಕ್ಕಳಿಗೆ ಅವರು ವಾಸಿಸುವ ಸ್ಥಳದ ಹತ್ತಿರದ ಅಂಗನವಾಡಿ ಕೇಂದ್ರಗಳ ಲಸಿಕಾ ಶಿಬಿರದಲ್ಲಿ ಅಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿ ಶಾಲೆಗಳಲ್ಲಿ ನೋಡಲ್ ಶಿಕ್ಷಕರನ್ನು ನೇಮಿಸಲಾಗಿದೆ. ಮಕ್ಕಳಿಗೆ ಅಥವಾ ಪೋಷಕರಿಗೆ ಲಸಿಕಾಕರಣದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಶಿಕ್ಷಣ ಸಂಸ್ಥೆಯ ನೋಡಲ್ ಅಧಿಕಾರಿಯವರನ್ನು/ಮುಖ್ಯಸ್ಥರನ್ನು/ಅಥವಾ ವೈದ್ಯಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ. ಲಸಿಕಾ ಶಿಬಿರ ದಿನಾಂಕದಂದು ಪೋಷಕರು ಲಸಿಕಾ ಶಿಬಿರ ಜರುಗುವ ಶಿಕ್ಷಣ ಸಂಸ್ಥೆಗಳಲ್ಲಿ ಉಪಸ್ಥಿತರಿದ್ದು ಲಸಿಕಾ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಇದೇ ವೇಳೆ ಮೆದುಳು ಜ್ವರ ಖಾಯಿಲೆಯು ಜಪಾನೀಸ್ ಎನ್‍ಸೆಫಲೈಟಿಸ್ (ಜೆಇ) ವೈರಾಣುವಿನಿಂದ ಉಂಟಾಗುತ್ತದೆ. ಈ ರೋಗಾಣು ಕ್ಯೂಲೆಕ್ಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಈ ವೈರಾಣು ಸಾಮಾನ್ಯವಾಗಿ ವಲಸೆ ಹಕ್ಕಿಗಳು ಮತ್ತು ವಿಶೇಷವಾಗಿ ಹಂದಿಗಳು ಉಗ್ರಾಣದಂತಿರುವುದರಿಂದ ಹಂದಿಗಳಿಗೆ ಸೋಂಕನ್ನು ಉಂಟು ಮಾಡುತ್ತದೆ. ಪ್ರಾಣಿಗಳನ್ನು ಕಡಿದ ಸೊಳ್ಳೆಗಳು ಮನುಷ್ಯರನ್ನು ಕಡಿದರೆ ಆಗ ಮಾನವರಿಗೆ ಈ ರೋಗ ಹರಡಬಹುದು. ಪ್ರಪಂಚದಾದ್ಯಂತ 24 ರಾಷ್ಟ್ರಗಳಲ್ಲಿ ಜಪಾನೀಸ್ ಎನ್‍ಸೆಫಲೈಟಿಸ್ (ಜೆಇ) ಎಂಡೆಮಿಕ್ ಎಂದು ಗುರುತಿಸಲ್ಪಟ್ಟಿದೆ. ಇವುಗಳಲ್ಲಿ ಭಾರತ ಸೇರಿದಂತೆ 11 ಏಷ್ಯಾ ರಾಷ್ಟ್ರಗಳು ಸೇರಿದ್ದು, ಪ್ರತಿ ವರ್ಷ 68,000 ಪ್ರಕರಣಗಳು ವರದಿ ಆಗುತ್ತಿವೆ. ಇವುಗಳಲ್ಲಿ ಮರಣ ಪ್ರಮಾಣ ಶೇ. 30 ರಷ್ಟಿದ್ದು, ಗುಣ ಹೊಂದಿದವರಲ್ಲಿ ಶೇ.30 ರಿಂದ ಶೇ.50 ರಷ್ಟು ಪ್ರಕರಣಗಳಲ್ಲಿ ನರ ದೌರ್ಬಲ್ಯ, ಬುದ್ಧಿಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟಾಗುತ್ತದೆ. ಈ ಕಾಯಿಲೆಯನ್ನು ತಡೆಗಟ್ಟಲು ಜೆ.ಇ. ಲಸಿಕೆಯು ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!