ಸುರತ್ಕಲ್ ಟೋಲ್ ತೆರವು ಆದೇಶ: ಡಿ.1ರಿಂದ ಅನಿರ್ಧಿಷ್ಟಾವಧಿ ಧರಣಿ ಮುಕ್ತಾಯ-ಹೋರಾಟ ಸಮಿತಿ ನಿರ್ಧಾರ

ಮಂಗಳೂರು, ನ.29 : ಡಿ.1 ರಿಂದ ಸುರತ್ಕಲ್ ಅಕ್ರಮ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹವನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಪ್ರತಿಭಟನೆಯನ್ನು ಡಿ.1 ರಂದು ಸಂಜೆ ಮುಕ್ತಾಯಗೊಳಿಸಲಾಗುವುದು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಮಿತಿಯು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನೂರಾರು ಸಂಘ ಸಂಸ್ಥೆಗಳ, ಜನಸಮೂಹದ ವ್ಯಾಪಕ ಬೆಂಬಲ ಪಡೆದ ಹಗಲು ರಾತ್ರಿ ಧರಣಿಯ ತೀವ್ರತೆಗೆ ಮಣಿದ ಸರಕಾರ ಡಿಸೆಂಬರ್ ಒಂದರಿಂದ ಸುರತ್ಕಲ್ ಟೋಲ್ ಗೇಟ್ ಮುಚ್ಚಲು ಆದೇಶಿಸಿದೆ. ಇದು ಪಟ್ಟು ಬಿಡದ ಜನ ಹೋರಾಟಕ್ಕೆ ಸಂದ ಗೆಲುವು ಎಂದು ಅಭಿಪ್ರಾಯ ಪಟ್ಟಿರುವ ಹೋರಾಟ ಸಮಿತಿ ಹೋರಾಟಕ್ಕೆ ಸಹಕರಿಸಿದೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದೆ. ಹಾಗೂ ನವಂಬರ್ 30 ಮಧ್ಯರಾತ್ರಿ 12 ಗಂಟೆಗೆ ಸುರತ್ಕಲ್ ಟೋಲ್ ಗೇಟ್ ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿ.1 ರಂದು ಸಂಜೆ ನಾಲ್ಕು ಗಂಟೆಗೆ ಅನಿರ್ಧಿಷ್ಟಾವಧಿ ಧರಣಿ ಸಮಾರೋಪ ನಡೆಸಲು ನಿರ್ಧರಿಸಿದೆ. ಇದೇ ವೇಳೆ ಹೆಜಮಾಡಿ ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ ಹೋರಾಟ ಮುಂದುವರಿಯಲಿದ್ದು, ಡಿ. 2ರಂದು ಹೆಜಮಾಡಿ ಟೋಲ್‍ನಲ್ಲಿ ಸಾಮೂಹಿಕ ಧರಣಿ ನಡೆಸಲು ಸಮಿತಿ ನಿರ್ಧರಿಸಿದೆ ಎಂದು ತಿಳಿಸಿದೆ.

ಇನ್ನು ಈ ಬಗ್ಗೆ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಅವರು, ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವ ಸಂದರ್ಭದಲ್ಲಿ ಹೆಜಮಾಡಿಯ ನವಯುಗ್ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸಿ ಸುರತ್ಕಲ್ ಅಕ್ರಮ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವುದು ಅನ್ಯಾಯ. ಇದು ಎರಡೂ ಜಿಲ್ಲೆಯ ಜನರಿಗೆ ಬಿಜೆಪಿ ಸರಕಾರ ಎಸಗಿರುವ ದ್ರೋಹ. ಇಂತಹ ಕೆಟ್ಟ ಸ್ಥಿತಿಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಂಸದ, ಶಾಸಕರು ನೇರ ಹೊಣೆ. ಟೋಲ್ ತೆರವು ಪ್ರಕ್ರಿಯೆ ಸಂದರ್ಭ ಅವರು ಮಧ್ಯಪ್ರವೇಶ ನಡೆಸದೆ ನಿರ್ಲಿಪ್ತರಾಗಿದ್ದ ಕಾರಣ ಹೆಜಮಾಡಿಯಲ್ಲಿ ಶುಲ್ಕ ಹೆಚ್ಚಳಕ್ಕೆ ಕಾರಣವಾಗಿದೆ. ಹೋರಾಟ ಸಮಿತಿಯು ಹೆಜಮಾಡಿಯಲ್ಲಿ ಹೆಚ್ಚುವರಿ ಶುಲ್ಕ ಸಂಗ್ರಹದ ನಿರ್ಧಾರವನ್ನು ಕಟುವಾಗಿ ಖಂಡಿಸುತ್ತದೆ, ಹೆಜಮಾಡಿಯಲ್ಲಿ ಶುಲ್ಕ ಕಡಿತಕ್ಕಾಗಿ ನಡೆಯಲಿರುವ ಹೋರಾಟದಲ್ಲಿ ಭಾಗಿಯಾಗಲಿದೆ. ಹೆಜಮಾಡಿ ಟೋಲ್ ಹೆಚ್ಚಳ ರದ್ದುಗೊಳಿಸಲು ಆಗ್ರಹಿಸಿ ನಡೆಯಲಿರುವ ಹೋರಾಟ ಡಿಸೆಂಬರ್ ಎರಡರಂದು ಹೆಜಮಾಡಿಯಲ್ಲಿ ಸಾಮೂಹಿಕ ಧರಣಿಯ ಮೂಲಕ ಚಾಲನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ತಾತ್ಕಾಲಿಕ ನೆಲೆಯಲ್ಲಿ 2015 ಡಿಸೆಂಬರ್ ನಲ್ಲಿ ಸುಂಕ ಸಂಗ್ರಹ ಆರಂಭಿಸಿದ ಸುರತ್ಕಲ್ ಟೋಲ್ ಗೇಟ್ ತೆರವಿಗಾಗಿ ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ’ ಕಳೆದ ಆರು ವರ್ಷಗಳಿಂದ ಸತತ ಹೋರಾಟ ಸಂಘಟಿಸುತ್ತಾ ಬಂದಿದೆ. 2022 ವರ್ಷ ಪೂರ್ತಿ ಹೋರಾಟ ತೀವ್ರ ಸ್ವರೂಪದಲ್ಲಿ ನಡೆದಿದೆ. ಅಕ್ಟೋಬರ್ 28 ರಿಂದ ಟೋಲ್ ಗೇಟ್ ತೆರವುಗೊಳ್ಳದೆ ತೆರಳುವುದಿಲ್ಲ ಎಂಬ ಘೋಷಣೆಯೊಂದಿಗೆ ಸುರತ್ಕಲ್ ಟೋಲ್ ಗೇಟ್ ಸಮೀಪ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *

error: Content is protected !!