ಮೃತ್ಯು ಕೂಪವಾಗಿರುವ ಮಲ್ಪೆ ಬಂದರಿನ ಹೂಳು: ಇನ್ನೆಷ್ಟು ಬಲಿ ಬೇಕು ?

ಮಲ್ಪೆ, ನ.27 : ಬಂದರಿನಲ್ಲಿ ತುಂಬಿರುವ ಹೂಳಿಗೆ ಬಿದ್ದು ಮೀನುಗಾರರು ಸಾವನ್ನಪ್ಪಿರುವ ಬಗ್ಗೆ ಆಗಾಗ ಸುದ್ದಿಗಳು ವರದಿಯಾಗುತ್ತಲೇ ಇವೆ. ಇದೀಗ ಇದೇ ಮಲ್ಪೆ ಬಂದರಿನ ಹೂಳಿಗೆ ಬಿದ್ದು ಕಳೆದ 10 ತಿಂಗಳಲ್ಲಿ ಒಟ್ಟು 13 ಮಂದಿ ಕಾರ್ಮಿಕರು ಪ್ರಾಣ ಕಳೆದು ಕೊಂಡಿದ್ದಾರೆ ಎಂಬ ಆತಂಕಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.

ಮಲ್ಪೆ ಮೀನುಗಾರಿಕೆ ಬಂದರು ಏಷ್ಯಾದ ಅತೀ ದೊಡ್ಡ ಸರ್ವ ಋತು ಮೀನುಗಾರಿಕಾ ಬಂದರು ಎಂಬ ಖ್ಯಾತಿಗೆ ಒಳಪಟ್ಟಿದೆ. ಆದರೆ ಇಂತಹ ಪ್ರಸಿದ್ಧ ಬಂದಿನಲ್ಲಿ ಡ್ರಜ್ಜಿಂಗ್ ಕಾರ್ಯ ಸರಿಯಾಗಿ ಆಗದೇ ಇರುವ ಕಾರಣ ಇದೀಗ ಬಂದರು ಮೀನುಗಾರರ ಪಾಲಿಗೆ ಮೃತ್ಯು ಕೂಪವಾಗಿ ಪರಿಣಮಿಸುತ್ತಿದೆ.

ಏಳೆಂಟು ವರ್ಷಗಳ ಹಿಂದೆ ಮಲ್ಪೆ ಬಂದರಿನಲ್ಲಿ ಹೂಳು ತೆಗೆಯುವ ಡ್ರಜ್ಜಿಂಗ್ ಕಾರ್ಯವನ್ನು ಖಾಸಗಿ ಕಂಪೆನಿಯೊಂದಕ್ಕೆ ವಹಿಸಿಕೊಡಲಾಗಿತ್ತು. ಆದರೆ ಈ ಕಂಪೆನಿ ಶೇ.30ರಷ್ಟು ಮಾತ್ರ ಹೂಳು ತೆಗೆದು ಶೇ.70ರಷ್ಟು ಕಾರ್ಯ ಬಾಕಿ ಇರಿಸಿಕೊಂಡಿತ್ತು ಎಂಬ ಆರೋಪ ಕೇಳಿ ಬಂದಿದೆ. ಕಳೆದ 7-8 ವರ್ಷಗಳಿಂದ ಬಂದರಿನಲ್ಲಿ ಡ್ರೆಜ್ಜಿಂಗ್ ಕೆಲಸ ನಡೆಯದಿರುವುದರಿಂದ ಇದೀಗ ಹೂಳು ಬಂದರಿನಲ್ಲಿ ಆವರಿಸಿಕೊಂಡಿದೆ.
ಬಂದರಿನಲ್ಲಿನ ಹೂಳಿನಿಂದ ಬೋಟುಗಳ ಚಲನೆಗೂ ತೊಂದರೆ ಆಗುತ್ತಿದೆ. ಬೋಟುಗಳು ಕೆಸರಿಗೆ ತಾಗಿಕೊಂಡೇ ಸಾಗುತ್ತಿದೆ. ಇದರ ಪರಿಣಾಮ ಬೋಟು ಗಳ ಇಂಜಿನಿಗೂ ಹಾನಿಯಾಗುತ್ತಿದೆ. ಅಲ್ಲದೆ ಹೂಳಿನಿಂದ ಬೋಟು ಗಳು ಹಿಮ್ಮುಖವಾಗಿ ಚಲಿಸಲು ಆಗದೆ ಪರಸ್ಪರ ಡಿಕ್ಕಿ ಹೊಡೆಯುತ್ತಿವೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಹಾಗೂ ಎರಡು ಸಾವಿರಕ್ಕೂ ಅಧಿಕ ಬೋಟುಗಳು ಲಂಗರು ಹಾಕಬಹುದಾದ ಮೀನುಗಾರಿಕಾ ಬಂದರು ಕಳೆದ 8 ವರ್ಷದಿಂದ ಹೂಳು ತುಂಬಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿದೆ. ಇಲ್ಲಿ ಲೆಕ್ಕ ಇಲ್ಲದಂತೆ ಕಾರ್ಮಿಕರು ಸಾಯುತ್ತಿದ್ದರೂ ಸರಕಾರ ಮಾತ್ರ ನಿರ್ಲಕ್ಷ್ಯ ವಹಿಸಿದೆ. ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಮೀನುಗಾರರು ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಳುಗು ತಜ್ಞ ಈಶ್ವರ ಮಲ್ಪೆ ಅವರು, ಮಲ್ಪೆ ಬಂದರಿನಲ್ಲಿ ಹೂಳು ತುಂಬಿರುವುದರಿಂದ ಕೇವಲ 10-12 ಅಡಿ ಮಾತ್ರವಷ್ಟೆ ನೀರು ಇದೆ. ಅಲ್ಲದೆ ಬಂದರಿನಲ್ಲಿ ನೂರಾರು ಬೋಟುಗಳು ಒಂದಕ್ಕೊಂದು ತಾಗಿಕೊಂಡೆ ಲಂಗಾರು ಹಾಕಿವೆ. ಇಲ್ಲಿ ಕೆಲಸದ ವೇಳೆ ಒಂದು ಬೋಟಿನಿಂದ ಇನ್ನೊಂದು ಬೋಟಿಗೆ ಹೋಗುವಾಗ ಆಯತಪ್ಪಿ ಹಲವು ಮಂದಿ ಮೀನುಗಾರರು ನೀರಿಗೆ ಬಿದ್ದಿದ್ದಾರೆ. ಬಂದರಿನಲ್ಲಿ ಹೂಳು ತುಂಬಿರುವುದರಿಂದ ನೀರಿಗೆ ಬಿದ್ದವರು ನೀರಿನ ಆಳಕ್ಕೆ ಹೋಗಿ ಕೆಸರಿನಲ್ಲಿ ಸಿಲುಕಿಕೊಂಡು ಮೇಲೆ ಬರಲು ಸಾಧ್ಯವಾಗದೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಪ್ರತಿವರ್ಷ 20-22 ಮಂದಿ ಸಾಯುತ್ತಿದ್ದಾರೆ. ಹೂಳು ತುಂಬಿರುವುದರಿಂದ ನೀರಿಗೆ ಬಿದ್ದವರನ್ನು ರಕ್ಷಣೆ ಮಾಡಲು ಕೂಡ ಜನ ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಹೇಳುತ್ತಾರೆ.

ಹಾಗೂ ಇಲ್ಲಿ ಸ್ಕೂಟರ್, ಬೈಕ್, ರಿಕ್ಷಾ, ಟೆಂಪೆÇಗಳು ಕೂಡ ಆಯ ತಪ್ಪಿ ನೀರಿಗೆ ಬಿದ್ದು ಹೂಳಿನಲ್ಲಿ ಸಿಲುಕಿಕೊಂಡಿವೆ. ಬಂದರಿನಲ್ಲಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಾದ ಆಂಧ್ರ, ತಮಿಳುನಾಡು, ಕೇರಳ, ಒರಿಸ್ಸಾ, ಉತ್ತರ ಪ್ರದೇಶ, ಬಿಹಾರದ ಕಾರ್ಮಿಕರು ಕೂಡ ಬಹಳ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ವಾರೀಸುದಾರರಿಲ್ಲದ ಎಷ್ಟು ಮಂದಿ ಕಾರ್ಮಿಕರು ಇಲ್ಲಿ ನೀರಿಗೆ ಬಿದ್ದು ಹೂಳಿನಲ್ಲಿ ಹೂತು ಹೋಗಿದ್ದಾರೆಂಬುದು ಲೆಕ್ಕ ಸಿಕ್ಕಿಲ್ಲ. ಬಂದರಿನಲ್ಲಿ ಸುಮಾರು 12-15 ಅಡಿ ಆಳದಷ್ಟು ಹೂಳು ತೆಗೆಯಬೇಕಾಗಿದೆ. ಇದರಿಂದ ನೀರಿಗೆ ಬಿದ್ದ ಕಾರ್ಮಿಕರು ಹೂಳಿನಲ್ಲಿ ಹೂತು ಹೋಗದೆ ಮೇಲೆ ಬರುವ ಸಾಧ್ಯತೆಗಳಿವೆ. ಈ ಮೂಲಕ ಅವರ ಪ್ರಾಣ ಕೂಡ ಕಾಪಾಡಬಹುದು. ಇದೀಗ ಹೂಳಿನಿಂದಾಗಿ ಯಾರು ಕೂಡ ನೀರಿಗೆ ಬಿದ್ದವರನ್ನು ರಕ್ಷಣೆ ಮಾಡಲು ಹೋಗುತ್ತಿಲ್ಲ ಎಂದು ಈಶ್ವರ ಮಲ್ಪೆ ತಿಳಿಸಿದ್ದಾರೆ.

ಮೀನುಗಾರಿಕಾ ಕೆಲಸದ ವೇಳೆ ನೀರಿಗೆ ಬಿದ್ದು ಜೀವ ಕಳೆದುಕೊಂಡವರ ಕುಟುಂಬಕ್ಕೆ ಸಂಕಷ್ಟ ಪರಿಹಾರ ನಿಧಿಯನ್ನು ನೀಡದೆ ಸರಕಾರ ಬಾಕಿ ಇರಿಸಿ ಕೊಂಡಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಸಮುದ್ರ ಮೀನುಗಾರಿಕೆಯಲ್ಲಿ ದುರ್ಮರಣ ಹೊಂದಿದ ಮೀನುಗಾರರ ಕುಟುಂಬಕ್ಕೆ 6 ಲಕ್ಷ ರೂ. ಸಂಕಷ್ಟ ಪರಿಹಾರ ನಿಧಿಯನ್ನು ನೀಡುವ ಬಗ್ಗೆ ಸರಕಾರ ಘೋಷಿಸಿತ್ತು. ಆದರೆ ಮಲ್ಪೆಯಲ್ಲಿ ಕಳೆದ 5-6 ವರ್ಷಗಳಿಂದ ನೀರಿಗೆ ಬಿದ್ದು 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಸರಕಾರ ಮಾತ್ರ ಮೃತರ ಕುಟುಂಬಕ್ಕೆ ಸಂಕಷ್ಟ ಪರಿಹಾರ ನಿಧಿಯನ್ನು ನೀಡದೆ ಬಾಕಿ ಇರಿಸಿದೆ. ಕಳೆದ 2 ವರ್ಷಗಳಿಂದ ಕರಾವಳಿಯಲ್ಲಿ 35ಕ್ಕೂ ಅಧಿಕ ಅರ್ಜಿಗಳು ಸರಕಾರಕ್ಕೆ ಸಲ್ಲಿಕೆಯಾಗಿವೆ. ಸುಮಾರು 2 ಕೋಟಿ ರೂ. ಬಾಕಿ ಇದೆ ಎಂದು ಆಳ ಸಮುದ್ರ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಿ ಮೀನುಗಾರರ ಸಂಘ ಮಲ್ಪೆ ಇದರ ಅಧ್ಯಕ್ಷ ದಯಕರ ವಿ.ಸುವರ್ಣ ಅವರು, “ಮೀನುಗಾರಿಕೆ ಮುಗಿಸಿ ಬಂದ ಬೋಟುಗಳಲ್ಲಿ ಮುಂಜಾನೆ 4 ಗಂಟೆಯಿಂದ ಕನ್ನಿ ಮೀನುಗಾರರಿಂದ ಮೀನು ಇಳಿಸುವ ಕಾಯಕ ನಡೆಯುತ್ತದೆ. ಕತ್ತಲೆಯಲ್ಲಿ ಕೆಲಸ ಮಾಡುವುದರಿಂದ ಇವರು ಒಂದು ವೇಳೆ ಕಾಲು ಜಾರಿ ನೀರಿಗೆ ಬಿದ್ದರೆ ಮೇಲೇಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ. ಬಹುತೇಕ ಮಂದಿ ಜೀವ ಭಯದಿಂದ ಮೀನು ಇಳಿಸುವ ಕಾರ್ಯ ಮಾಡಲು ಹಿಂಜರಿಯುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಬಂದರು ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಉದಯ ಕುಮಾರ್ ಅವರು ಮಾತನಾಡಿ, “ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಡ್ರಜ್ಜಿಂಗ್ ಕಾರ್ಯ ನಡೆಸಲು ಸರಕಾರ ದಿಂದ ಆಡಳಿತ ಅನುಮೋದನೆ ದೊರೆತಿದೆ. ಈ ಸಂಬಂಧ ಟೆಂಡರ್ ಪ್ರಕಿಯೆ ನಡೆಯುತ್ತಿದ್ದು, ತಿಂಗಳೊಳಗೆ ಎಲ್ಲ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಲಾಗುವುದು” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!