ಮಣಿಪಾಲ: ವಿದ್ಯಾರ್ಥಿಯನ್ನು ಭಯೋತ್ಪಾದಕ ಎಂದ ಪ್ರಾಧ್ಯಾಪಕ -ವೀಡಿಯೋ ವೈರಲ್
ಮಣಿಪಾಲ, ನ.28 : ಮಣಿಪಾಲದ ಮಾಹೆಯ ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಜಿನಿಯರಿಂಗ್ ವಿಭಾಗದ ತರಗತಿಯಲ್ಲಿ ವಿದ್ಯಾರ್ಥಿಯೋರ್ವನನ್ನು ಭಯೋತ್ಪಾದಕನಿಗೆ ಹೋಲಿಸಿ ಕಸಬ್ ಎಂದು ಕರೆದ ಪ್ರಾಧ್ಯಾಪಕರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಿದ್ಯಾರ್ಥಿ ಪ್ರಾಧ್ಯಾಪಕನನ್ನು ತರಾಟೆಗೆ ತೆಗೆದುಕೊಂಡ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಈ ಘಟನೆ ಮೂರು ನಾಲ್ಕು ದಿನಗಳ ಹಿಂದೆ ನಡೆದಿದ್ದು, ವಿದ್ಯಾರ್ಥಿ ಹಂಝಾ ತನ್ನನ್ನು ಭಯೋತ್ಪಾದಕ ಎಂದು ಕರೆದ ಸಹಾಯಕ ಪ್ರಾಧ್ಯಾಪಕ ರವೀಂದ್ರನಾಥ್ ಅವರನ್ನು ಪ್ರಶ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಹಾಗೂ ವೀಡಿಯೊದಲ್ಲಿ ವಿದ್ಯಾರ್ಥಿ, ಪ್ರಾಧ್ಯಾಪಕರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ, “ನೀವು ನನ್ನನ್ನು ಹಾಗೆ ಹೇಗೆ ಕರೆಯುತ್ತೀರಿ” ಎಂದು ಪ್ರಶ್ನಿಸಿದ್ದಾರೆ. ನಾನು ಹಾಸ್ಯದ ಧಾಟಿಯಲ್ಲಿ ಇದನ್ನು ಹೇಳಿದ್ದೇನೆ ಎಂದ ಪ್ರಾಧ್ಯಾಪಕರಿಗೆ, 26/11 ಘಟನೆ ಹಾಸ್ಯ ಅಲ್ಲ ಮತ್ತು ಮುಸ್ಲಿಮನಾಗಿ ಈ ರೀತಿಯ ವರ್ತನೆಯನ್ನು ಪ್ರತಿನಿತ್ಯ ಅನುಭವಿಸುತ್ತಿದ್ದೇವೆ ಎಂದು ವಿದ್ಯಾರ್ಥಿ ತಿಳಿಸಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಯ ಕ್ಷಮೆಯಾಚಿಸಿದ ಪ್ರಾಧ್ಯಾಪಕರು, “ನೀನು ನನ್ನ ಮಗನ ಸಮಾನ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿ, ನೀವು ನಿಮ್ಮ ಮಗನನ್ನು ಕೂಡ ಹಾಗೆ ನಡೆಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ನೀವು ಕ್ಷಮಿಸಿದ ಮಾತ್ರಕ್ಕೆ ನಿಮ್ಮ ಆಲೋಚನೆ ಬದಲಾಗಲು ಸಾಧ್ಯವೇ ಎಂದು ವಿದ್ಯಾರ್ಥಿ ಕೇಳಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಾಧ್ಯಾಪಕರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಾಕ ಆಕ್ರೋಶ ಮತ್ತು ಆಕ್ಷೇಪ ವ್ಯಕ್ತವಾಗುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಐಟಿ ನಿರ್ದೇಶಕರಾದ ಪಿಆರ್ ಎಸ್.ಪಿ.ಕರ್ ಅವರು, “ಈ ಘಟನೆ ಗುರುವಾರ ಅಥವಾ ಶುಕ್ರವಾರ ನಮ್ಮ ಸಂಸ್ಥೆಯಲ್ಲಿ ನಡೆದಿದೆ. ಈ ಬಗ್ಗೆ ಆಂತರಿಕ ವಿಚಾರಣೆ ನಡೆಯುವವರೆಗೆ ತರಗತಿ ತೆಗೆದುಕೊಳ್ಳದಂತೆ ಸಂಬಂಧಪಟ್ಟ ಸಹಾಯಕ ಪ್ರಾಧ್ಯಾಪಕರಿಗೆ ಸೂಚನೆ ನೀಡಿದ್ದೇವೆ” ಎಂದು ತಿಳಿಸಿದ್ದಾರೆ.
ಈ ವಿವಾದದ ಬಳಿಕ ಹೇಳಿಕೆ ನೀಡಿರುವ ವಿದ್ಯಾರ್ಥಿ ಹಂಝಾ, ಜನಾಂಗೀಯ ಟೀಕೆ ಎಂದಿಗೂ ಒಪ್ಪುವಂತದಲ್ಲ. ನಾನು ನನ್ನ ಪ್ರಾಧ್ಯಾಪಕರನ್ನು ಪ್ರಶ್ನಿಸುವ ವೀಡಿಯೊ ವೈರಲ್ ಆಗಿದೆ. ಈ ದೇಶ ಕಂಡ ದೊಡ್ಡ ಭಯೋತ್ಪಾದಕರಲ್ಲಿ ಒಬ್ಬನಾದ ಕಸಬ್ ಎಂಬ ಸ್ವೀಕಾರಾರ್ಹವಲ್ಲದ ಹೆಸರಿನಿಂದ ಅವರು ನನ್ನನ್ನು ಕರೆದಿರುವುದೇ ನನ್ನ ಆಕ್ಷೇಪಕ್ಕೆ ಕಾರಣ. ಬಳಿಕ ನಾನು ಪ್ರಾಧ್ಯಾಪಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಕ್ಷಮೆಯಾಚಿಸಿದ್ದಾರೆ. ಪ್ರಾಧ್ಯಾಪಕರಿಂದ ತಪ್ಪಾಗಿದೆ. ಅದೂ ಕೂಡ ನಾನು ಮೆಚ್ಚುವ ವ್ಯಕ್ತಿ ಹೀಗೆ ಮಾಡಿರುವುದು ಬೇಸರ ತಂದಿದೆ. ಆದರೆ ಒಂದು ಬಾರಿ ಇದನ್ನು ಕ್ಷಮಿಸಿ ಇಲ್ಲಿಗೇ ಬಿಟ್ಟು ಬಿಡಬೇಕು ಎಂದು ತಿಳಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.