ಡಿ.6ಕ್ಕೆ ಬೆಂಗಳೂರಿನಲ್ಲಿ ದಲಿತರ ಐಕ್ಯತಾ ಸಮಾವೇಶ: ಜಯನ್ ಮಲ್ಪೆ

ಉಡುಪಿ ನ.26 (ಉಡುಪಿ ಟೈಮ್ಸ್ ವರದಿ) : ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಡಿ.6 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಏರ್ಪಡಿಸಲಾಗಿದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಉಡುಪಿಯ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ದಲಿತ ಸಂಘಟನೆಗಳ ವಿಘಟನೆಯಿಂದ ಚಳುವಳಿಗೆ ಹಿನ್ನಡೆಯಾಗಿದೆ. ಎಲ್ಲರೂ ಒಟ್ಟಾಗಿ ಹೋರಾಟ ಮಾಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂಬ ಭಾವನೆಯಿಂದ ಸಮಾನ ಮನಸ್ಕ ಹನ್ನೆರಡು ಸಂಘಟನೆಗಳು ಐಕ್ಯ ಹೋರಾಟಕ್ಕೆ ತೀರ್ಮಾಸಿದ್ದು, ಉಡುಪಿ ಜಿಲ್ಲೆಯಲ್ಲೂ ಬಹುತೇಕ ಎಲ್ಲಾ ದಲಿತ ಸಂಘಟನೆಗಳು ಒಂದಾಗಿ ಈ ಸಮಾವೇಶದಲ್ಲಿ ಭಾಗವಹಿಸಲು ನಿರ್ಧರಿಸಲಾಗಿದೆ ಎಂದರು.

ದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮರೆಯಾಗಿ ಕೋಮು ವಿಷದ ಗೋಡ್ಸೆ, ಸಾವರ್ಕರ್ ಮುನ್ನಡೆ ಬರುತ್ತಿದ್ದಾರೆ, ಈ ಹಿನ್ನಲೆಯಲ್ಲಿ ಚದುರಿ ಹೋಗಿರುವ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಸಮಾವೇಶ ಆಯೋಜಿಸಲಾಗಿದೆ. ಮಾತೆತ್ತಿದರೆ ನಮ್ಮ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳುತ್ತಾರೆ, ಆದರೆ ಬಡತನದ ಪ್ರಮಾಣ ದ್ವಿಗುಣವಾಗುತ್ತಿದೆ. ಸರಕಾರಿ ಶಾಲೆಗಳು ಒಂದೊಂದಾಗಿ ಜೀವಬಿಡುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ದಿನೇ ದಿನೇ ಹೆಚ್ಚಾಗುತ್ತಿದೆ, ನಿರುದ್ಯೋಗ ಸಮಸ್ಯೆ ಮಿತಿಮೀರುತ್ತಿದೆ. ದಲಿತರ ಸಾವು ನೋವುಗಳಿಗೆ ಕೊನೆ ಮೊದಲೇ ಇಲ್ಲದಂತಾಗಿದೆ ಎಂದು ಹೇಳಿದರು.

ನರೇಂದ್ರ ಮೋದಿಯವರ ಆವೈಜ್ಞಾನಿಕ ನೋಟು ಅಮಾನ್ಯೀಕರಣದಿಂದ ದೇಶದ ಅರ್ಥವ್ಯವಸ್ಥೆ ಕುಸಿದು ಬಿದ್ದಿದ್ದು, ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರ ಏರುಗತಿಯಲ್ಲಿ ಸಾಗಿ ಇಡೀ ದೇಶವೇ ತತ್ತರಿಸಿ ಹೋಗುತ್ತಿದೆ. ಇಂತಹ ದುಸ್ಥಿತಿಯಲ್ಲಿ ಜಿಎಸ್‍ಟಿಯಂತಹ ಜನವಿರೋಧಿ ತೆರಿಗೆ ನೀತಿಯನ್ನು ಜಾರಿಗೆ ತಂದು ಕೂಲಿಕಾರರು, ಬಡವರು, ಭಿಕ್ಷುಕರನ್ನು ಬಿಡದೆ ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ದಲಿತರು, ದುರ್ಬಲರು, ರೈತರು, ಕೂಲಿ ಕಾರ್ಮಿಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಿ, ಸಾವಿರಾರು ಕೋಟಿ ರೂಪಾಯಿಗಳ ಒಡೆಯರಾದ ಕಾರ್ಪೊರೇಟರ್ ಕುಲಗಳಿಗೆ ಲಕ್ಷಾಂತರ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಆಡಳಿತದಲ್ಲಿ ಜನವಿರೋಧಿ ಕಾಯ್ದೆ ಮತ್ತು ನೀತಿಗಳನ್ನು ಜಾರಿಗೊಳಿಸಿ, ಪ್ರಜಾಪ್ರಭುತ್ವ ಸಂವಿಧಾನ ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ನುಚ್ಚುನೂರು ಮಾಡಿದೆ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ, ಮೀಸಲಾತಿ ಆಶಯಗಳಿಗೆ ಆರ್.ಎಸ್.ಎಸ್, ಬಿಜೆಪಿ ಮತ್ತು ಸಂಘಪರಿವಾರ ಅಡ್ಡಿಯುಂಟುಮಾಡುತ್ತಿದ್ದು, ತಳ ಸಮುದಾಯವನ್ನು ಧರ್ಮದ ಹೆಸರಿನಲ್ಲಿ ಒಡೆಯಲಾಗುತ್ತಿದೆ. ಇನ್ನೊಂದಡೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸಿರುವುದಾಗಿ ರಾಜ್ಯ ಸರಕಾರ ಗಿಮಿಕ್ ಮಾಡುತ್ತಿದೆ. ವಾಸ್ತವವಾಗಿ ಸರಕಾರ ಸಾಮ್ಯದ ಎಲ್ಲಾ ಕ್ಷೇತ್ರಗಳನ್ನು ಈಗಾಗಲೇ ಖಾಸಗೀಕರಣಗೊಳಿಸಲಾಗಿದೆ. ಆದರೆ ಖಾಸಗಿ ಕೇತ್ರದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿಲ್ಲ. ಜೊತೆಗೆ ಮೀಸಲಾತಿಯ ಪರಿಕಲ್ಪನೆಯನ್ನು ನಾಶಮಾಡುವ ಉದ್ದೇಶದಿಂದ ಮೇಲ್ಜಾತಿಯವರಿಗೂ ಮೀಸಲಾತಿ ಜಾರಿಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಅವರು ಹೇಳಿದರು.

ಇದೇ ವೇಳೆ ದಲಿತ ಮುಖಂಡರಾದ ಸುಂದರ್ ಮಾಸ್ತರ್, ಮಂಜುನಾಥ ಗಿಳಿಯಾರು, ಶ್ಯಾಮ್‍ ರಾಜ್ ಬಿರ್ತಿ, ಶೇಖರ ಹೆಜಮಾಡಿ ಐಕ್ಯತಾ ಸಮಾವೇಶದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಹರೀಶ್ ಸಾಲ್ಯಾನ್, ರಮೇಶ್ ಕೆಳಾರ್ಕಳಬೆಟ್ಟು, ವಿಶ್ವನಾಥ ಬೆಳ್ಳಂಪಳ್ಳ, ವಾಸುದೇವ ಮುದ್ದೂರು, ರಾಜುಬೆಟ್ಟಿನ ಮನೆ, ಭಗವಾನ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!