ಉಡುಪಿ: ವೇದ ಉಪನಿಷತ್ತುಗಳ ಕಾಲದಲ್ಲೂ ಪ್ರಜಾಪ್ರಭುತ್ವ ಇತ್ತು: ಸರಕಾರದ ಸುತ್ತೋಲೆ ವಿರುದ್ಧ ದಸಂಸ ಪ್ರತಿಭಟನೆ

ಉಡುಪಿ ನ.26(ಉಡುಪಿ ಟೈಮ್ಸ್ ವರದಿ) : ವೇದ ಉಪನಿಷತ್ತುಗಳ ಕಾಲದಲ್ಲೂ ಪ್ರಜಾಪ್ರಭುತ್ವ ಇತ್ತು ಎಂಬ ಕೇಂದ್ರ ಸರಕಾರದ ಸುತ್ತೋಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇಂದು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸುತ್ತೋಲೆ ಹರಿದು ಹಾಕುವ ಮೂಲಕ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಮೀಪ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಪ್ರತಿಭಟನಾ ನಿರತರು ಕೇಂದ್ರ ಸರಕಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಸಂಚಾಲಕ ಜಯನ್ ಮಲ್ಪೆ ಅವರು ಮಾತನಾಡಿ, ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಇಂದು ಪ್ರಜಾಪ್ರಭುತ್ವದ ಸುಳ್ಳು ಸುತ್ತೋಲೆಗಳನ್ನು ಹೊರಡಿಸಿ ಸಂವಿಧಾನವನ್ನು ನಾಶ ಮಾಡುವ ಸಂಚು ನಡೆಯುತ್ತಿದೆ. ಕೇಂದ್ರ ಸರಕಾರ ಜನವಿರೋಧಿ ನೀತಿಯ ಜೊತೆಗೆ ಜನರ ಬದುಕಿನಲ್ಲಿ ಕೂಡಾ ಚೆಲ್ಲಾಟ ಆಡುತ್ತಿದೆ. ಇಂತಹ ಅತ್ಯಂತ ಕ್ರೂರವಾದ ಹ್ಯೇಯ ಸುತ್ತೋಲೆ ಹೊರಡಿಸಿ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಉಡುಪಿ ಜಿಲ್ಲಾ ದಲಿತ ಸಂಘಟನೆಗಳ ಐಕ್ಯತಾ ಸಮಿತಿಯ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಅವರು ಮಾತನಾಡಿ, ಕೇಂದ್ರ ಸರಕಾರದ ಪುರಾತತ್ವ ಶಾಸ್ತ್ರ ವಿಭಾಗ ಮತ್ತು ಯುಜಿಸಿ ವಿವಾದಾತ್ಮಕ ಸುತ್ತೋಲೆ ಹೊರಡಿಸಿದೆ. ಅವರು ಭಾರತದಲ್ಲಿ ಪ್ರಜಾ ಪ್ರಭುತ್ವ ವ್ಯವಸ್ಥೆ ವೇದ ಕಾಲದಿಂದಲೂ ಇತ್ತು. ವೇದ ಮತ್ತು ಉಪನಿಷತ್ತುಗಳಲ್ಲಿ ಭಾರತದಲ್ಲಿ ಪ್ರಜಾ ಪ್ರಭುತ್ವ ಇತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಾದಾರಗಳು ದೊರೆಯುತ್ತದೆ ಎಂದು ಹೇಳುತ್ತಾರೆ. ಆದರೆ ನಾವೆಲ್ಲ ಅಂದುಕೊಂಡಂತೆ ಅಂಬೇಡ್ಕರ್ ಅವರು ಸಂವಿಧಾನ ನೀಡುವ ಮೂಲಕ ಸಹೋದರತೆ ಅಂಶಗಳನ್ನು ಬುದ್ದನ ಭೋಧನೆಯಿಂದ ಪಡೆದುಕೊಂಡಿದ್ದೇನೆ ಹಾಗೂ ಪ್ರಜಾ ಪ್ರಭುತ್ವ ಪರಿಕಲ್ಪನೆಯನ್ನು ಅಮೇರಿಕಾ, ಇಂಗ್ಲೆಂಡ್, ಐರ್ಲ್ಯಾಂಡ್ ನ ಸಂವಿಧಾನದಿಂದ ಪಡೆದುಕೊಂಡೆ ಎಂದಿದ್ದಾರೆ ಇದಕ್ಕೆ ದಾಖಲೆಗಳು ಇವೆ. ಸಂವಿಧಾನ ರಚನಾ ಸಮಿತಿಯ ಸಭೆಯಲ್ಲಿ ಕೂಡಾ ಈ ವೇದ ಉಪನಿಷತ್ತುಗಳ ಬಗ್ಗೆ ಚರ್ಚೆಯಾಗಲಿ, ಪ್ರಸ್ತಾಪವಾಗಲಿ ಆಗಿಲ್ಲ. ಸಂವಿಧಾನವನ್ನು ಮಂಡನೆ ಮಾಡುವಾಗ ಪಾರ್ಲಿಮೆಂಟ್ ನಲ್ಲಿ ದಿನಗಟ್ಟಲೇ ಚರ್ಚೆ ಆಗಿದೆ ಅಲ್ಲಿ ಕೂಡಾ ಇದರ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ. ಆದರೆ ಕೇಂದ್ರ ಸರಕಾರ ಉದ್ದೇಶ ಪೂರ್ವಕವಾಗಿ ಅಂಬೇಡ್ಕರ್ ಹಾಗೂ ಸಂವಿಧಾನವನ್ನು ರಚನೆ ಮಾಡಿಕೊಟ್ಟ ಮೇಧಾವಿ ನಾಯಕರ ಕೊಡುಗೆಯನ್ನು ಕಡೆಗಣಿಸಲು. ದೇಶದಲ್ಲಿ ಅವರದ್ದೇ ಆದ ಹೊಸ ಇತಿಹಾಸವನ್ನು ರಚಿಸಲು ಕಾರ್ಯ ಸೂಚಿಯನ್ನು ಜಾರಿ ಗೊಳಿಸಲು ಈ ರೀತಿಯ ಅಧಿ ಸೂಚನೆ ಹೊರಡಿಸಿ ಜನರ ತಲೆಗೆ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದೇಶದ ನೈಜ್ಯ ಇತಿಹಾಸವನ್ನು ತಿರುಚಲು. ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ಹೋರಾಟ ಗಾರರು ಈ ದೇಶಕ್ಕೆ ಕಟ್ಟಿಕೊಟ್ಟ ಕೊಡುಗೆಗಳ ಪ್ರಭಾವವನ್ನು ಕಡಿಮೆ ಮಾಡಲು ಪ್ರಭಾಪ್ರಭುತ್ವ ವಾದಿಗಳು ಎಂದೂ ಅವಕಾಶ ನೀಡುವುದಿಲ್ಲ. ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡಸಿದ್ದೇವೆ ಮುಂದೆ ಜಿಲ್ಲೆಯಲ್ಲಿ ಉಗ್ರವಾದ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!