ಮಾದಕ ವಸ್ತು ಮಾರಾಟ: ನೈಜೀರಿಯಾ ಪ್ರಜೆ ಸೇರಿ 7 ಅಂತರರಾಜ್ಯ ಡ್ರಗ್ಸ್ ಪೆಡ್ಲರ್ ಗಳ ಬಂಧನ
ಬೆಂಗಳೂರು ನ.26 : ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಸೇರಿ 7 ಮಂದಿ ಅಂತರರಾಜ್ಯ ಡ್ರಗ್ಸ್ ಪೆಡ್ಲರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಪ್ರಜೆ ಹಿಲ್ಲರಿ ಎಗ್ವೋಬಾ (39) , ಬೆಂಗಳೂರಿನ ಮಡಿವಾಳ ನಿವಾಸಿ ಹಫೀಝ್ ರಮ್ಲಾನ್ (28), ದೇವರಚಿಕ್ಕನ ಹಳ್ಳಿ ನಿವಾಸಿ ಮನ್ಸೂರ್.ಕೆ.ಕೆ (33), ದ.ಕ. ಜಿಲ್ಲೆಯ ಉಮ್ಮರ್ ಫಾರೂಕ್ (23), ಮುಂಬೈ ನಿವಾಸಿ ವೈಶಾಲಿ ದಾಸ್ (29), ಸಿಂಗನಾಯಕನಹಳ್ಳಿ ನಿವಾಸಿ ಬೆಂಜಮಿನ್ (32), ರಾಮಮೂರ್ತಿ ನಗರ ನಿವಾಸಿ ತ್ರಿವೇಣಿ (25) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು ಒಂದು ಲಕ್ಷ ರೂ. ಮೌಲ್ಯದ 7 ಗ್ರಾಂ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನ ಮತ್ತು 8 ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಬಂಧಿತ ಆರೋಪಿಗಳ ಪೈಕಿ ಹಫೀಝ್ ರಮ್ಲಾನ್ ನ ವಿರುದ್ದ ಹೈದರಾಬಾದ್ ಮಲಕ್ ಪೇಟ್, ಮಂಗಳೂರಿನ ಪಾಂಡೇಶ್ವರ ಮತ್ತು ಸೂರತ್ಕಲ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಾಗೂ ಬೆಂಜಮಿನ್ ವಿರುದ್ಧ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತು ನೈಜೀರಿಯಾ ಪ್ರಜೆ ಹಿಲ್ಲರಿ ಎಗ್ವೋಬಾ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.