ಶಿರ್ವ; ಸೀಸನ್‌ಬಾಲ್ ಕ್ರಿಕೆಟ್ ಪಂದ್ಯಾಕೂಟ ಆರಂಭ

ಶಿರ್ವ(ಉಡುಪಿ ಟೈಮ್ಸ್ ವರದಿ): ಶಿರ್ವ ಹೆಚ್.ಜೆ.ಸಿ. ಕ್ರಿಕೆಟ್ ಅಕಾಡೆಮಿ, ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ಶಿರ್ವ ಶ್ಯಾಮ್ ಸ್ಕ್ವಾರ್, ಕಿನ್ನಿಮೂಲ್ಕಿ ಆಲ್‌ರಾಯನ್ ಬಯೋಸೈಕಲ್ಸ್ ಸಂಸ್ಥೆಯ ಸಹಯೋಗದೊಂದಿಗೆ 8 ದಿನಗಳ ಕಾಲ ನಡೆಯುವ 18 ವರ್ಷದೊಳಗಿನ ಸೀಸನ್‌ಬಾಲ್ ಕ್ರಿಕೆಟ್ ಪಂದ್ಯ ಕೂಟಕ್ಕೆ ಶಿರ್ವ ಹಿಂದೂ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಚಾಲನೆ ಸಿಕ್ಕಿದೆ.

ಕಾಪು ಪೊಲೀಸ್ ವೃತ್ತನಿರೀಕ್ಷಕ ಪ್ರಕಾಶ್ ಅವರು ಈ ಸೀಸನ್‌ಬಾಲ್ ಕ್ರಿಕೆಟ್ ಪಂದ್ಯಾಕೂಟವನ್ನು ಇಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಜಂಜಾಟದ ಜೀವನದಲ್ಲಿ ಮನುಷ್ಯ ವ್ಯಾಯಾಮ ಮತ್ತು ಕ್ರೀಡೆಯಿಂದ ಮಾತ್ರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಗ್ರಾಮೀಣ ಪ್ರತಿಭೆಗಳು ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದರೆ ಸ್ಪೋರ್ಟ್ಸ್ ಕೋಟಾದಲ್ಲಿ ಸರಕಾರದ ಉನ್ನತ ಹುದ್ದೆಗಳನ್ನು ಏರಲು ಸಾಧ್ಯವಿದೆ ಎಂದು ತಿಳಿಸಿದರು.

ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ ಅವರು ಮಾತನಾಡಿ, ಕರಾವಳಿಯಲ್ಲಿ ಕ್ರೀಡಾಕ್ಷೇತ್ರದಲ್ಲಿ ಹೆಚ್ಚಿನ ಪ್ರತಿಭೆಗಳು ಮಿಂಚುತ್ತಿದ್ದು, ಪ್ರಸ್ತುತ ಕೊರೊನಾ ಕಾರಣದಿಂದಾಗಿ ಕ್ರೀಡಾಳುಗಳು ಅವಕಾಶ ವಂಚಿತರಾಗಿದ್ದಾರೆ. ಆದರೆ ಧೃತಿಗೆಡದೆ ನಿರಂತರ ಕ್ರೀಡಾ ಅಭ್ಯಾಸದಲ್ಲಿ ಯುವ ಕ್ರೀಡಾಳುಗಳು ತೊಡಗಿಸಿಕೊಳ್ಳಬೇಕೆಂದು ಕ್ರೀಡಾಳುಗಳಿಗೆ ಸಲಹೆ ನೀಡಿದರು .

ಇದೇ ವೇಳೆ ಸ್ಟೀಡ್ಸ್ ಸಂಸ್ಥೆಯ ಚೈನ್ ರಹಿತ ಆಧುನಿಕ ಹೊಸ ವಿನ್ಯಾಸದ ಬೈಸಿಕಲ್ಸ್ ನ್ನು ಪ್ರಪ್ರಥಮವಾಗಿ ಉಡುಪಿಯಲ್ಲಿ ಕಾಪು ಪೊಲೀಸ್ ವೃತ್ತನಿರೀಕ್ಷಕ ಪ್ರಕಾಶ್ ಬಿಡುಗಡೆ ಮಾಡಿ, ಸೈಕಲ್ ರೈಡ್ ಮಾಡಿದರು. ಈ ಸೀಸನ್ ಬಾಲ್ ಕ್ರಿಕೆಟ್ ಕ್ರೀಡಾ ಕೂಟದಲ್ಲಿ ಕರಾವಳಿಯ ಮೂರು ಜಿಲ್ಲೆಗಳ 12 ತಂಡಗಳು ಭಾಗವಹಿಸುತ್ತಿವೆ ಎಂದು ತಿಳಿದು ಬಂದಿದೆ.

ಈ ಸಂದರ್ಭ ಶಿರ್ವ ಶ್ಯಾಮ್ ಸ್ಕ್ವಾರ್ ಮಾಲೀಕ ಸುಧೀರ್ ಶೆಟ್ಟಿ ಅಟ್ಟಿಂಜೆ, ಸಿಯೇಸ್ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಕಂಪೆನಿಯ ಮಾರ್ಕೆಟಿಂಗ್ ಮುಖ್ಯಸ್ಥ ಎಸ್.ವೆಂಕಟೇಶಲು ಶೇಷ, ಕಿನ್ನಿಮೂಲ್ಕಿ ಆಲ್‌ರಾಯನ್ ಬಯೋಸೈಕಲ್ಸ್ ಸಂಸ್ಥೆಯ ಮಾಲೀಕ ಮೊಹಮ್ಮದ್ ಆರೀಫ್, ಶಿರ್ವ ಹಿಂದೂ ಜೂನಿಯರ್ ಕಾಲೇಜು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ರಾಜಗೋಪಾಲ್ ಕೆ, ಎಂಎಸ್‌ಆರ್‌ಎಸ್ ಕಾಲೇಜಿನ ಪ್ರಾಂಶುಪಾಲೆ ಡಾ.ನಯನ ಪಕ್ಕಳ, ಶಿರ್ವ ಹಿಂದೂ ಜೂನಿಯರ್ ಕಾಲೇಜು ಮುಖ್ಯಸ್ಥ ಭಾಸ್ಕರ್, ಸಚ್ಚಿದಾನಂದ ಹೆಗ್ಡೆ ಶಿರ್ವ, ಶಿರ್ವ ಹೆಚ್.ಜೆ.ಸಿ. ಕ್ರಿಕೆಟ್ ಅಕಾಡೆಮಿ ಮುಖ್ಯ ತರಬೇತುದಾರ ಸದಾನಂದ ಶಿರ್ವ, ಪ್ರಸಾದ್ ಶೆಟ್ಟಿ ಶಿರ್ವ, ಕ್ರಿಕೆಟ್ ತರಬೇತುದಾರ ರೆನ್‌ಟ್ರವೆರ್ ಡಯಾಸ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!