ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್: ಮನೆ, ಕಚೇರಿಗೆ ದಾಳಿ- ಹಲವು ದಾಖಲೆ, 10 ಲಕ್ಷ ನಗದು ಪತ್ತೆ
ಬೆಳಗಾವಿ ನ.26 : 2 ಲಕ್ಷ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ
ಚನ್ನಮ್ಮನ ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಮನೆ ಹಾಗೂ ಕಚೇರಿಗೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ನಿನ್ನೆ ತಡರಾತ್ರಿವರೆಗೂ ಪರಿಶೀಲನೆ ನಡೆಸಿದ್ದಾರೆ.
ತಡರಾತ್ರಿ ವರೆಗೂ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಹಲವು ದಾಖಲೆ ಹಾಗೂ 10 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಖೋದನಾಪುರ ಗ್ರಾಮದ ರಾಜೇಂದ್ರ ಬಾಪುಸಾಜೇಬ ಇನಾಮದಾರ ಅವರು ತಮ್ಮ ತಂದೆ ಬಾವುಸಾಹೇಬ್ ಇನಾಮದಾರ ಅವರ ಹೆಸರಿನಲ್ಲಿದ್ದ 10 ಎಕರೆ ಜಮೀನಿನನ್ನು ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಆರೋಪಿಗಳು ಇದಕ್ಕೆ 5 ಲಕ್ಷ ಲಂಚ ಕೇಳಿದ್ದರು. ಮುಂಗಡವಾಗಿ 2 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂದು ರೈತ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣದ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. ಅದರಂತೆ ನಿನ್ನೆ 2 ಲಕ್ಷ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್ ಸೋಮಲಿಂಗಪ್ಪ ಹಲಗಿ ಹಾಗೂ ಗುಮಾಸ್ತ ಜಿ.ಪ್ರಸನ್ನ ಸಿಕ್ಕಿಬಿದ್ದಿದ್ದು, ಇಬ್ಬರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಆರೋಪಿಗಳನ್ನು ಶನಿವಾರ ಬೆಳಿಗ್ಗೆ ಬೆಳಗಾವಿಗೆ ಕರೆತಂದು, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದರು. ಬಳಿಕ ಲೋಕಾಯುಕ್ತ ನ್ಯಾಯಾಧೀಶರ ಮನೆಗೆ ಆರೋಪಿತರನ್ನು ಕರೆದೊಯ್ದರು. ಅಲ್ಲಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕರೆತಂದರು ಎಂಬ ಮಾಹಿತಿ ಮಾಧ್ಯಮ ವರದಿಯಿಂದ ತಿಳಿದು ಬಂದಿದೆ.