ಸುರತ್ಕಲ್ ಟೋಲ್ ಹೆಜಮಾಡಿಯೊಂದಿಗೆ ವಿಲೀನ: ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

ಉಡುಪಿ ನ.25(ಉಡುಪಿ ಟೈಮ್ಸ್ ವರದಿ) : ಸತತ ಹೋರಾಟದ ಬಳಿಕ ಕೊನೆಗೂ ಡಿ. 1 ರಿಂದ ಸುರತ್ಕಲ್ ಟೋಲ್ ಕೇಂದ್ರ ಮತ್ತು ಹೆಜಮಾಡಿ ಟೋಲ್ ಕೇಂದ್ರ ವಿಲೀನಗೊಳ್ಳಲಿದೆ. ಆದರೆ ಒಂದೆಡೆ ಸುರತ್ಕಲ್ ಟೋಲ್ ಗೇಟ್ ತೆರವು ಗೊಳಿಸಿ ಸಿಹಿಸುದ್ದಿ ನೀಡಿದ್ದ ಬೆನ್ನಲೇ ಇದೀಗ ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿಯೇ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ ಎಂದು ತಿಳಿದು ಬಂದಿದೆ.

ಇದೀಗ ಸರಕಾರದ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸರಕಾರ ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಧೋರಣೆ ತಾಳಿದೆ ಎಂದು ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಕಾನೂನು ಬಾಹಿರವಾಗಿ ಅಕ್ರಮವಾಗಿ ಸಾರ್ವಜನಿಕರಿಂದ ಟೋಲ್ ಸಂಗ್ರಹಿಸಲಾಗುತ್ತಿದೆ ಎಂಬ ಕಾರಣಕ್ಕೆ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ತೆರವುಗೊಳಿಸುವಂತೆ ಹೋರಾಟಗಳು ನಡೆದಿದ್ದವು. ಹೀಗಿರುವಾಗ ಒಂದು ಕಡೆ ಟೋಲ್ ಕೇಂದ್ರ ತೆರವು ಗೊಳಿಸಿ, ಆ ಶುಲ್ಕವನ್ನು ಇನ್ನೊಂದು ಟೋಲ್ ಕೇಂದ್ರದೊಂದಿಗೆ ಹೆಚ್ಚುವರಿ ಶುಲ್ಕವನ್ನು ಸಾಮಾನ್ಯ ಶುಲ್ಕ ಎಂಬಂತೆ ನಿಗದಿ ಮಾಡಿದರೆ ಇಲ್ಲಿ ಟೋಲ್ ಸಂಗ್ರಹ ಕೇಂದ್ರ ತೆರವುಗೊಳಿಸ ಆದ ಪ್ರಯೋಜನವಾದರೂ ಏನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಟೋಲ್ ನೆಪದಲ್ಲಿ ಜನರ ಹಣ ಸುಲಿಗೆ ಮಾಡುತ್ತಿದ್ದವರಿಗೆ ಸರಕಾರ ಒಂದು ಬಾಗಿಲು ಮುಚ್ಚಿ ಇನ್ನೊಂದು ಬಾಗಿಲಿನಿಂದ ಸ್ವಾಗತಿಸುತ್ತಿದೆ ಎಂದು ಸರಕಾರದ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.

ಭಾರೀ ವಿರೋಧದ ನಡುವೆಯೂ ಅಕ್ರಮವಾಗಿ ಕಾರ್ಯಚರಿಸುತ್ತಿದ್ದ ಸುರತ್ಕಲ್ ಟೋಲ್ ಗೇಟ್ ನಲ್ಲಿ ಜನರಿಂದ ಹಣ ಲೂಟಿ ಮಾಡಲಾಗುತ್ತಿತ್ತು. ಹಲವಾರು ಹೋರಾಟಗಳ ಬಳಿಕ ಇತ್ತೀಚಿನ ಕೆಲ ವಾರಗಳ ಹಿಂದೆಯಷ್ಟೇ ಸುರತ್ಕಲ್ ಟೋಲ್ ಗೆ ತೆರವು ಗೊಳಿಸುವುದಾಗಿ ಸರಕಾರ ಆದೇಶಿಸಿತ್ತು. ಆದರೆ ಸರಕಾರದ ಆದೇಶದ ಹೊರತಾಗಿಯೂ ಟೋಲ್ ಕೇಂದ್ರದಲ್ಲಿ ನಿರಂತರ ಟೋಲ್ ಸಂಗ್ರಹ ನಡೆಯುತ್ತಿತ್ತು. ಸದ್ಯ ಸುರತ್ಕಲ್ ಟೋಲ್ ಗೇಟ್ ತೆರವು ಗೊಳ್ಳಲಿದೆ ಆದರೂ ಇಲ್ಲಿನ ಶುಲ್ಕವನ್ನು ಹೆಜಮಾಡಿ ಟೋಲ್ ನೊಂದಿಗೆ ಸಂಗ್ರಹಿಸಲು ಸರಕಾರ ನೀಡಿರುವ ಅಧಿಸೂಚನೆ ಸಾರ್ವಜನಿಕರನ್ನು ಕೆರಳಿಸುವಂತೆ ಮಾಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುತ್ತೋಲೆ ಪ್ರಕಾರ ಹೆಜಮಾಡಿ ಟೋಲ್ ಗೇಟ್ ನಲ್ಲಿ ಏಕ ಮುಖ ಸಂಚಾರದ ಕಾರು, ಜೀಪ್, ವ್ಯಾನ್ ಅಥವಾ ಲಘು ಮೋಟಾರ್ ವಾಹನಗಳಿಗೆ ಸುರತ್ಕಲ್ ನ ಸುಂಕ 60 ರೂ. ಜೊತೆಗೆ ಹೆಜಮಾಡಿ ಸುಂಕ 40 ರೂ. ಸೇರಿಸಿ 100 ರೂ. ಪಾವತಿಸಬೇಕು. ಇದೇ ರೀತಿ ಏಕ ಮುಖ ಹಾಗೂ ದ್ವಿಮುಖ ವಾಹನಗಳ ಸಂಚಾರಕ್ಕೆ ಬೇರೆ ಬೇರೆ ವಾಹನಗಳಿಗೆ ಸಂಬಂಧಿಸಿ ನಿಗದಿ ಪಡಿಸಿದ ಸುಂಕಕ್ಕೆ ಅನುಗುಣವಾಗಿ ದರಗಳು ನಿಗದಿಯಾಗಿದೆ. ಅಲ್ಲದೆ ಸುರತ್ಕಲ್ ಟೋಲ್ ನಲ್ಲಿ ಕೆ.19 ನೋಂದಣಿಯ ಕಾರುಗಳಿಗೆ ಇದ್ದ ರಿಯಾಯಿತಿ ರದ್ದಾಗಲಿದೆ. ಆದ್ದರಿಂದ ಸುರತ್ಕಲ್ ಟೋಲ್ ತೆರವು ಗೊಳಿಸಿ ಸಾರ್ವಜನಿಕರಿಗೆ ಸರಕಾರ ಯಾವುದೇ ಸಹಾಯ ಮಾಡಿಲ್ಲ. ಬದಲಾಗಿ ಸಾರ್ವಜನಿಕರ ಹಣ ಲೂಟಿಗೆ ಪರ್ಯಾಯ ಮಾರ್ಗವನ್ನು ಸರಕಾರ ಹುಡುಕಿಕೊಂಡಿದೆ ಎಂದು ಆರೋಪಿಸುತ್ತಿದ್ದಾರೆ. ಹಾಗೂ ಸರಕಾರ ಸುರತ್ಕಲ್ ಟೋಲ್ ಗೇಟ್ ತೆರವು ಗೊಳಿಸಿ ಯಾವುದೇ ದೊಡ್ಡ ಸಾಧನೆ ಮಾಡಿಲ್ಲ. ಇದರಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಟೋಲ್ ಸಂಗ್ರಹ ಕೇಂದ್ರದ ತೆರವು ಆದೇಶದ ಹೊರತಾಗಿಯೂ ಟೋಲ್ ಸಂಗ್ರಹ ನಿರಂತರ ನಡೆಯುತ್ತಿದೆ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿರುವ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮೀತಿ ಹಾಗೂ ಅನೇಕ ಸಂಘ ಸಂಸ್ಥೆಗಳು ಸರತ್ಕಲ್ ಟೋಲ್ ಸಂಗ್ರಹ ಕೇಂದ್ರದಲ್ಲಿ ಸಂಪೂರ್ಣ ಸುಂಕ ವಸೂಲಿ ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಹಾಗೂ ಇಲ್ಲಿ ಟೋಲ್ ಸಂಗ್ರಹ ತೆರವು ಗೊಳುಸಿ ಹೆಜಮಾಡಿಯಲ್ಲಿ ಹೆಚ್ಚಿನ ಸುಂಕ ಪಡೆದರೇ ಇದೇ ಮಾದರಿಯ ಉಗ್ರ ಹೋರಾಟ ಹೆಜಮಾಡಿಯಲ್ಲೂ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿತ್ತು.

ಇದೀಗ ಈಗಾಗಲೇ ಸರಕಾರದ ಸುತ್ತೋಲೆಯಿಂದ ಆಕ್ರೋಶಗೊಂಡಿರುವ ಸಾರ್ವಜನಿಕರು ಮತ್ತೆ ಪ್ರತಿಭಟನೆ ನಡೆದುವುದಂತೂ ಖಚಿತ ಆದರೆ ಮುಂದೆ ಯಾವ ರೀತಿ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಆತಂಕ ಸೃಷ್ಟಿಸಿದೆ. ಅಲ್ಲದೆ ಅತ್ಯಂತ ಜನ ವಿರೋಧಿ ಸರಕಾರ ಮಾತ್ರ ಹೀಗೆ ಮಾಡಲು ಸಾಧ್ಯ. ಸುರತ್ಕಲ್ ಟೋಲ್ ದರವನ್ನು ಪೂರ್ತಿಯಾಗಿ ಸೇರಿಸಿ ಹೆಜಮಾಡಿ ಯಲ್ಲಿ ಸಂಗ್ರಹಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿರುವುದು ಜನತೆಗೆ ಮಾಡಿರುವ ಮಹಾ ಮೋಸ. 7 ವರ್ಷಗಳ ಕಾಲ ಸುರತ್ಕಲ್ ಟೋಲ್ ನಲ್ಲಿ ಸಂಗ್ರಹಿಸಿದ ನೂರಾರು ಕೋಟಿ. ರೂ. ಗೆ ಬೆಲೆಯೇ ಇಲ್ಲವಾಗಿದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.

ಒಟ್ಟಿನಲ್ಲಿ ಸರಕಾರದ ಧೋರಣೆ ಒಂದು ಕೈಯಲ್ಲಿ ನೀಡಿ ಮತ್ತೊಂದು ಕೈಯಿಂದ ಕಸಿದು ಕೊಂಡಂತಿದೆ. ಮೊದಲೇ ಎರಡೆರಡು ಟೋಲ್ ಸಂಗ್ರಹ ಕೇಂದ್ರದಲ್ಲಿ ಸುಂಕ ಪಾವತಿಸಿ ಪರದಾಡುತ್ತಿದ್ದ ಜನರಿಗೆ ಇನ್ನೇನು ಟೋಲ್ ಕೇಂದ್ರ ರದ್ದತಿಯ ವಿಷಯ ತಿಳಿದು ನಿಟ್ಟುಸಿರು ಬಿಡಬೇಕು ಎನ್ನುವಾಗಲೇ ಅದೇ ಸುಂಕವನ್ನು ಮತ್ತೊಂದು ಟೋಲ್ ಕೇಂದ್ರದಲ್ಲಿ ಪಾವತಿಸಬೇಕು ಎಂಬ ಸರಕಾರದ ಆದೇಶ ಸಾರ್ವಜನಿಕರ ಹಣ ಲೂಟಿಗೆ ಮತ್ತೊಂದು ಯೋಜನೆ ರೂಪಿಸಿದಂತೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ಉಡುಪಿ ಜಿಲ್ಲಾ ಸಮಿತಿ ವಿರೋಧ…

ಹೆಚ್ಚಿಸಿರುವ ಟೋಲ್ ದರವನ್ನು ತಕ್ಷಣವೇ ಈ ಹಿಂದಿನಂತೆ ಜಾರಿಗೆ ತರುವಂತೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ. ಸುರತ್ಕಲ್ ಟೋಲ್‍ನ್ನು ಹೆಜಮಾಡಿ ಟೋಲ್‍ನೊಂದಿಗೆ ವಿಲೀನಗೊಳಿಸಿ 2 ಪಟ್ಟು ದರವನ್ನು ಒಂದೇ ಟೋಲ್‍ನೊಂದಿಗೆ ವಸೂಲಿ ಮಾಡುವುದರ ಮೂಲಕ 2 ಜಿಲ್ಲೆಯ ಜನತೆಗೆ ಟೋಲ್‍ನ ಹೊರೆಯನ್ನು ಹೆಚ್ಚಿಸಿ ಉಡುಪಿ ಜಿಲ್ಲೆ ಮತ್ತು ಮಂಗಳೂರು ಜಿಲ್ಲೆಯ ಜನತೆಗೆ ಬೆಲೆ ಏರಿಕೆಯ ಬಳುವಳಿಯೊಂದಿಗೆ ಟೋಲ್ ದರವನ್ನು ಕೂಡ ಹೆಚ್ಚಿಸಿ ಉಡುಗೊರೆ ನೀಡಲಾಗಿದೆ. ಉಡುಪಿ ಜಿಲ್ಲೆ ಮತ್ತು ಮಂಗಳೂರು ಜಿಲ್ಲೆಯ ಶಾಸಕರು ಮತ್ತು ಸಂಸದರು ಈ ಟೋಲ್ ಹೆಚ್ಚುವರಿಯ ಹೊಣೆಗಾರರಾಗಿದ್ದು, ಜನರ ಭಾವನೆ ಮತ್ತು ಕಷ್ಟಗಳ ಬಗ್ಗೆ ಕಿಂಚಿತ್ತು ತಲೆಕಡೆಸಿಕೊಳ್ಳದ ಜನಪ್ರತಿನಿಧಿಗಳು ಮಾತ್ರ ಈ ನಿರ್ಧಾರವನ್ನು ಬೆಂಬಲಿಸಲು ಸಾಧ್ಯ. ಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ಜನರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಪಕ್ಷವು ಜನರೊಂದಿಗೆ ಸೇರಿಕೊಂಡು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!