ಉಡುಪಿ: ಕಡಿಮೆ ಬೆಲೆಗೆ ಚಿನ್ನ, ಉದ್ಯೋಗದ ಆಮೀಷ- ದಂಪತಿಗಳ ಬಂಧನ

ಉಡುಪಿ ನ.25 : ರಾಜ್ಯದ ಹಲವೆಡೆ ಕಡಿಮೆ ಬೆಲೆಗೆ ಚಿನ್ನಾಭರಣ ಮಾರಾಟ ಹಾಗೂ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂಪತಿ ಆರೋಪಿಗಳನ್ನು ಈಶಾನ್ಯ ವಿಭಾಗದ ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದಾರೆ.

‘ಧನುಷ್ಯಾ ಅಲಿಯಾಸ್ ರಾಚೆಲ್ ಹಾಗೂ ಆಕೆಯ ಪತಿ ದರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್ ಬಂಧಿತ ಆರೋಪಿಗಳು.

‘ವಂಚನೆಯನ್ನೇ ವೃತ್ತಿ ಮಾಡಿಕೊಂಡಿದ್ದ ದಂಪತಿ, ಪದೇ ಪದೇ ಊರು ಬದಲಾಯಿಸುತ್ತಿದ್ದರು. ವಾಸವಿದ್ದ ಸ್ಥಳಗಳಲ್ಲಿ ಜನರನ್ನು ಪರಿಚಯ ಮಾಡಿಕೊಂಡು ವಂಚಿಸಿ ಪರಾರಿಯಾಗುತ್ತಿದ್ದರು. ಇವರಿಂದ ಸದ್ಯ 34.50 ಲಕ್ಷ ನಗದು ಹಾಗೂ 106 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ದೂರುದಾರರಾದ ಸ್ನೇಹಾ ಭಗವತ್, ಇಂದಿರಾನಗರದಲ್ಲಿ ನೈಲ್ ಬಾಕ್ಸ್ ಅಕಾಡೆಮಿ ನಡೆಸುತ್ತಿದ್ದಾರೆ. ಅಕಾಡೆಮಿಗೆ ಪ್ರವೇಶ ಪಡೆದಿದ್ದ ಧನುಷ್ಯಾ, ತನ್ನ ಪತಿ ದರ್ಬಿನ್ ದಾಸ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡಿದ್ದಳು. ಅಲ್ಲದೆ ಜಪ್ತಿ ಮಾಡಿರುವ ಚಿನ್ನಾಭರಣವನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ಆಮಿಷವೊಡ್ಡಿದ್ದಳು’. ‘ಆರೋಪಿ ಮಾತು ನಂಬಿದ್ದ ಸ್ನೇಹಾ, ಹಂತ ಹಂತವಾಗಿ 68 ಲಕ್ಷ ರೂ. ನೀಡಿದ್ದರು. ಆದರೆ ಆ ಬಳಿಕ ಹಣ ಪಡೆದಿದ್ದ ಆರೋಪಿಗಳು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು ಎಂದು ಸ್ನೇಹಾ ಅವರು ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. .

ಮತ್ತೊಂದೆಡೆ ಈ ಆರೋಪಿಗಳು ‘ದೇವನಹಳ್ಳಿಯ ಶಾಲೆಯೊಂದರ ಶಿಕ್ಷಕಿ ಶ್ವೇತಾ ಎಂಬುವವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿಗಳು, ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 96,750 ರೂ. ಪಡೆದಿದ್ದರು. ನಂತರ, ಉದ್ಯೋಗ ಕೊಡಿಸದೇ ಪರಾರಿಯಾಗಿದ್ದರು ಎಂಬುದಾಗಿ ಶಿಕ್ಷಕಿ ಶ್ವೇತಾ ದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದೀಗ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಈ ದಂಪತಿ ಆರೋಪಿಗಳನ್ನು ಉಡುಪಿಯಲ್ಲಿ ಬಂಧಿಸಿದ್ದಾರೆ. ಹಾಗೂ ಈ ಆರೋಪಿಗಳು `ಕಡಿಮೆ ಬೆಲೆಗೆ ಐ-ಫೋನ್, ಲ್ಯಾಪ್‍ಟಾಪ್ ಮಾರುವುದಾಗಿಯೂ ಹೇಳಿದ್ದು, ಅಕಾಡೆಮಿ ಕೆಲಸಗಾರರು, ಶಾಲಾ ಶಿಕ್ಷಕರು, ಮಕ್ಕಳ ಪೋಷಕರು, ನೆರೆ ಮನೆಗಳ ನಿವಾಸಿಗಳು ಸೇರಿ ಹಲವರನ್ನು ಆರೋಪಿಗಳು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!