ಉಡುಪಿ: ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಆಂಬುಲೆನ್ಸ್ ನಲ್ಲೇ 5 ಮಕ್ಕಳನ್ನು ಹೆತ್ತ ಮಹಿಳೆ!!- ಏನಿದು ಘಟನೆ

ಉಡುಪಿ ನ.25 (ಉಡುಪಿ ಟೈಮ್ಸ್ ವರದಿ) : ಇಂದ್ರಾಳಿ ಸೇತುವೆಯಿಂದ ರೈಲ್ವೆ ನಿಲ್ದಾಣದವರೆಗಿನ ಸಂಪೂರ್ಣ ಹದಗೆಟ್ಟಿರುವ ಜಾರ್ಜ್ ಫೆರ್ನಾಂಡಿಸ್ ರಸ್ತೆಯ ದುರಸ್ಥಿಗೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಟ್ಯಾಕ್ಸಿ ಮೆನ್ ವತಿಯಿಂದ ವತಿಯಿಂದ ಸಮಾಜ ಸೇವಕ ನಿತ್ಯಾನಂದ ವಳಕಾಡು ಅವರ ನೇತೃತ್ವದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಪ್ರಯಾಣಿಸುವಾಗ ಮಹಿಳೆಯೊಬ್ಬರು ಆಂಬ್ಯುಲೆನ್ಸ್ ನಲ್ಲಿಯೇ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ ಹಾಗೂ ರಸ್ತೆಯ ಅವ್ಯವಸ್ಥೆ ಬಗ್ಗೆ ಆಕ್ರೋಶಗೊಂಡು ಚಾಲಕರೋರ್ವರು ರಸ್ತೆ ನಡುವೆಯೇ ಕಣ್ಣೀರಿಡುತ್ತಿರುವ ಅಣುಕು ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಇಲ್ಲಿನ ರಸ್ತೆ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಈ ವೇಳೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಮಾತನಾಡಿ, ಇಂದ್ರಾಳಿ ರೈಲ್ವೆ ನಿಲ್ದಾಣ ಸಂಪರ್ಕಿಸುವ ಜಾರ್ಜ್ ಫೆರ್ನಾಂಡಿಸ್ ಹೆಸರಿನಲ್ಲಿರುವ ರಸ್ತೆಯಲ್ಲಿ ಬಹಳಷ್ಟು ಹೊಂಡ ಗುಂಡಿಗಳಿಂದ ಕೂಡಿದೆ. ಹೊಂಡ ಗುಂಡಿಗಳಿಂದ ಕೂಡಿರುವ ಈ ರಸ್ತೆಯಲ್ಲಿ ಸಾವಿರಾರು ಮಂದಿ ಸಂಚರಿಸುತ್ತಾರೆ. ರಸ್ತೆ ಹೊಂಡ ಗುಂಡಿಗಳಿಂದ ಕೂಡಿರುವುದರಿಂದ ಪ್ರಯಾಣಿಕರಿಗೆ ಹಾಗೂ ವಾಹನ ಚಾಲಕರಿಗೂ ಅನೇಕ ರೀತಿಯ ಸಮಸ್ಯೆಗಳಾಗುತ್ತಿದೆ. ಆದ್ದರಿಂದ ಇಂದ್ರಾಳಿ ರಸ್ತೆಯನ್ನು ಸಂಬಂಧಪಟ್ಟವರು ಶೀಘ್ರವಾಗಿ ಸರಿ ಪಡಿಸಬೇಕು ಎಂದು ಆಗ್ರಹಸಿದರು.

ಟ್ಯಾಕ್ಸಿ ಮೆನ್ ಅಧ್ಯಕ್ಷ ವಲೇರಿಯನ್ ಅವರು ಮಾತನಾಡಿ, ಈ ರಸ್ತೆ 5-6 ವರ್ಷಗಳಿಂದ ರಿಪೇರಿ ಆಗದೆ ತೀವ್ರ ಹದಗೆಟ್ಟಿದೆ, ಈ ಬಗ್ಗೆ ಮನವಿ ಸಲ್ಲಿಸಿದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನಗಳ ಸಂಚಾರಕ್ಕೆ ಅನಾನುಕೂಲವಾಗಿದೆ. ಹಾಗೂ ರಸ್ತೆಗೆ ಹಾಕಿದ ತೇಪ ಎದ್ದು ಕಾಂಕ್ರೀಟ್ ಮಾತ್ರ ಉಳಿದುಕೊಂಡಿದ್ದು ಇಂತಹ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಬಿಡಿ ಭಾಗಗಳಿಗೂ ಹಾನಿಯಾಗುತ್ತಿದೆ. ಅಲ್ಲದೆ ಮಣಿಪಾಲದ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಪಡೆಯಲು ಇಂದ್ರಾಳಿ ರೈಲ್ವೆ ಸ್ಟೇಷನ್ ಮೂಲಕ ರೈಲಿನಲ್ಲಿ ಬರುವ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಅನಾರೋಗ್ಯ ಪೀಡಿತರು, ವಯೋ ವೃದ್ಧರು, ಗರ್ಭಿಣಿಯರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಇದರಿಂದ ಇವರ ಆರೋಗ್ಯದ ಮೇಲೂ ರಸ್ತೆಗಳ ಹೊಂಡ ಗುಂಡಿಗಳು ಪರಿಣಾಮ ಬೀರುತ್ತಿದೆ. ಅಲ್ಲದೆ ರಸ್ತೆ ಇಕ್ಕೆಲಗಳಲ್ಲಿಯೂ ಕುರುಚಲು ಗಿಡ ಬೆಳೆದುಕೊಂಡಿದ್ದು ಇದೆಲ್ಲದನ್ನು ಸಂಬಂದಪಟ್ಟ ಇಲಾಖೆ ಗಮನಕ್ಕೆ ತರುವ ನಿಟ್ಟಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಆಟೋ ಚಾಲಕರ ಅಧ್ಯಕ್ಷ ಅಬ್ದುಲ್ ಖಾದರ್ ಅವರು ಸೇರಿದಂತೆ ಅನೇಕ ರಿಕ್ಷಾ ಚಾಲಕರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!