ಮಂಗಳೂರು: ಕೋಳಿ ಮಾಂಸ ನೀಡದ ಸಿಟ್ಟಿನಲ್ಲಿ ಅಂಗಡಿ ಮಾಲೀಕನಿಗೆ ಹಲ್ಲೆ : ದೂರು ದಾಖಲು

ಮಂಗಳೂರು ನ.19 : ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ  ಕೋಳಿ ಮಾಂಸ ನೀಡದ ಕಾರಣಕ್ಕೆ ಕೋಪಗೊಂಡ ಗ್ರಾಹಕರಿಬ್ಬರು ಕೋಳಿ ಅಂಗಡಿಯ ಮಾಲಕನಿಗೆ ಹಲ್ಲೆ ನಡೆಸಿರುವ  ಬಗ್ಗೆ ದೂರು ದಾಖಲಾಗಿದೆ.

ನಗರದ ಪಡೀಲ್ ನಿವಾಸಿ ಪುಷ್ಪರಾಜ್ ಹಲ್ಲೆಗೊಳಗಾದ ಅಂಗಡಿಯ ಮಾಲಕ. 

ಇವರು ಕಣ್ಣೂರು ಕೊಡಕ್ಕಲ್ ಬಳಿ ಕೆ.ಕೆ. ಚಿಕನ್ ಸೆಂಟರ್ ನಡೆಸುತ್ತಿದ್ದು, ಅ.31ರ ರಾತ್ರಿ ಅಂಗಡಿಯ ಬಾಗಿಲು ಮುಚ್ಚಿದ ಬಳಿಕ ಪರಿಚಯದ ರಾಹುಲ್ ಮತ್ತು ನಿಕ್ಷಿತ್ ಆಗಮಿಸಿ ಕೋಳಿ ಕೇಳಿದರು ಎನ್ನಲಾಗಿದೆ. ಈ ವೇಳೆ ಅಂಗಡಿಯ ಬಾಗಿಲು ಮುಚ್ಚಲಾಯಿತು ಎಂದು ಪುಷ್ಪರಾಜ್ ಹೇಳಿದಾಗ ಕೋಳಿ ಮಾಂಸ ಕೊಡಲೇಬೇಕು ಎಂದು ಹಠ ಹಿಡಿದಿದ್ದು, ಮಾತ್ರವಲ್ಲದೆ ಬಳಿಕ ಅವಾಚ್ಯ ಶಬ್ದದಿಂದ ಬೈದ ಆರೋಪಿಗಳು ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಗೊಳಗಾದ ಪುಷ್ಪರಾಜ್‌ ನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ನಡುವೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿಕೊಳ್ಳಲಾಗಿದೆ. ಘಟನೆ ನಡೆದು 18 ದಿನವಾಗಿದೆ. ಪೊಲೀಸರಿಗೆ ದೂರನ್ನೂ ನೀಡಲಾಗಿದೆ. ಗಂಭೀರ ಹಲ್ಲೆಗೊಳಗಾದ ಪುಷ್ಪರಾಜ್ ಶಸ್ತ್ರಚಿಕಿತ್ಸೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆರೋಪಿಗಳಾದ  ನಿಕ್ಷಿತ್ ಮತ್ತು ರಾಹುಲ್ ರಾಜಾರೋಷವಾಗಿ ತಿರುಗಾಡುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಹಾಗಾಗಿ ಆರೋಪಿಗಳನ್ನು ಬಂಧಿಸಿ ಪುಷ್ಪರಾಜ್‌ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪುಷ್ಪರಾಜ್‌ರ ಅಕ್ಕ ಶೋಭಾ ಕೇಶವ್ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published.

error: Content is protected !!