ಕಾಂಗ್ರೆಸ್ ಸ್ಥಾಪನಾ ದಿನಾಚರಣೆ: ಯೂತ್ ಇಂಟಕ್ ದ.ಕ ವತಿಯಿಂದ ರಕ್ತದಾನ ಶಿಬಿರ, ಅಕ್ಕಿ ವಿತರಣೆ

ಮಂಗಳೂರು: ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ಏನು ಮಾಡಿದೆ ಎಂದು ಬಿಜೆಪಿ ಪ್ರಶ್ನಿಸುತ್ತಿದೆ. ಬಡತನದಲ್ಲಿದ್ದ ದೇಶದ ಜನರಿಗೆ ವಸತಿ, ಉದ್ಯೋಗ, ಆಹಾರ ಭದ್ರತೆ ನೀಡಿದೆ. ಇದರ ಜತೆಗೆ ಇಂದು ಚಂದ್ರನ ಅಂಗಳಕ್ಕೆ ನಮ್ಮ ತಂತ್ರಜ್ಞಾನ ಮುಟ್ಟಲು ಅಂದು ಕಾಂಗ್ರೆಸ್ ಹಾಕಿದ ಬುನಾದಿ ಕಾರಣ.ಹೊರತು ನಿನ್ನೆ ಮೊನ್ನೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅಲ್ಲ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಸೋಮವಾರ ಪುರಭವನದಲ್ಲಿ ಇಂಟಕ್ ಹಾಗೂ ಯೂತ್ ಇಂಟಕ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಶ್ರಯದಲ್ಲಿ ರೆಡ್ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಲೇಡಿಗೋಶನ್ ಆಸ್ಪತ್ರೆ ಸಹಯೋಗದೊಂದಿಗೆ ಜರಗಿದ ಕಾಂಗ್ರೆಸ್ ಸ್ಥಾಪನಾ ದಿನಾಚರಣೆ ಹಾಗೂ ರಾಷ್ಟ್ರೀಯ ಇಂಟಕ್ ನಾಯಕ ರಾಕೇಶ್ ಮಲ್ಲಿ ಅವರ 50ನೇ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಹಾಗೂ ಅಕ್ಕಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಪಪ್ರಚಾರದಿಂದ ಕಾಂಗ್ರೆಸ್ ಗೆ ಇಂದು ಸೋಲಾಗಿರಬಹುದು ಆದರೆ ಮತ್ತೆ ಕಾಂಗ್ರೆಸ್ ಎದ್ದು ಬರಲಿದೆ. ಇಂಟಕ್ ಸಹಿತ ಕಾಂಗ್ರೆಸ್ ನ ಕಾರ್ಯಕರ್ತರು ಇಂದು ಈ ಬಗ್ಗೆ ಸಂಕಲ್ಪತೊಡಬೇಕು ಎಂದರು.
ಕೇಂದ್ರ ಸರಕಾರವು ಕಾರ್ಮಿಕರ, ರೈತ ವಿರೋಧ ನೀತಿಯನ್ನು ಅನುಸರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಮಿಕರಿಗೆ ಮತ್ತು ರೈತರಿಗೆ ಬೆಂಬಲವಾಗಿ ನಿಲ್ಲುವ ಸಂಕಲ್ಪ ತೊಡಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು .
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಪಕ್ಷವಾಗಿದ್ದು ಸತ್ಯ, ಶಾಂತಿ, ಅಹಿಂಸೆ ಮೂಲಕವೂ ಗೆಲುವು ಸಾಧಿಸ ಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.
ದೇಶದ ಏಕತೆ, ಬಡತನ ನಿವಾರಣೆಗೆ ಕಾಂಗ್ರೆಸ್ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ದೇಶದ ಹಿತಕ್ಕಾಗಿ ಕಾಂಗ್ರೆಸ್ ನಾಯಕರ ಬಲಿದಾನವಾಗಿದೆ. ಕಾಂಗ್ರೆಸ್ ನ ಮಹಾನ್ ಪುರುಷರು ಕಂಡ ಕನಸು ನನಸು ಮಾಡಲು ಕಾಂಗ್ರೆಸ್ ಪಕ್ಷ ನಿರಂತರವಾಗಿ ಶ್ರಮ ವಹಿಸಿದೆ ಎಂದು ನುಡಿದರು.

`ಇಂಟಕ್’ ಮುಖಾಂತರ ವಿವಿಧ ರೀತಿಯ ಜನಸೇವೆಗಳನ್ನು ಮಾಡುವ ಅವಕಾಶ ದೊರೆತಿದೆ. ಕೇಂದ್ರ ಸರಕಾರವು ಕಾರ್ಮಿಕರ ಸಂಘಟನೆಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಕಾರ್ಪೊರೇಟ್ ಕಂಪೆನಿಗಳ ಹಿತಕ್ಕಾಗಿ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. , ಕೇಂದ್ರ ಸರಕಾರ ದೇಶದ ಕೈಗಾರಿಕೆ, ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದೆ. ಇದರಿಂದಾಗಿ ದೇಶದ ಜನತೆಗೆ ಉದ್ಯೋಗ ಇಲ್ಲದಂತಾಗಿದೆ.

ಇದು ಕಳವಳಕಾರಿ ವಿಚಾರವಾಗಿದೆ. ಇಂಟಕ್ ನ್ನು ಇನ್ನಷ್ಟು ಬಲಪಡಿಸಿ ಕೇಂದ್ರ ಸರಕಾರದ ಕಾರ್ಮಿಕ ವಿರೋಧ ನೀತಿ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ಇಂಟಕ್ ಕಾರ್ಯಾಧ್ಯಕ್ಷ , ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಹೇಳಿದರು. ದ.ಕ ಜಿಲ್ಲಾ ಇಂಟಕ್ ಅಧ್ಯಕ್ಷ ಮನೋಹರ್ ಶೆಟ್ಟಿ ಅವರು ಕಾರ್ಯಕ್ರಮ ಸಂಘಟಿಸಿ ಯಶಸ್ವೀ ಗೊಳಿಸಿದ ಸರ್ವರನ್ನೂ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ನೂರಾರು ಮಂದಿಗೆ ಅಕ್ಕಿ ವಿತರಣೆ ನಡೆಯಿತು. ರಕ್ತದಾನ ಶಿಬಿರದಲ್ಲಿ ಕಾರ್ಯಕರ್ತರು ರಕ್ತದಾನ ಮಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಮೊಯಿದೀನ್ ಬಾವಾ, ಕಳ್ಳಿಗೆ ತಾರನಾಥ ಶೆಟ್ಟಿ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ಎನ್ಎಂಪಿಟಿ ಟ್ರಸ್ಟಿ, ಇಂಟಕ್ ಮುಖಂಡ ಅಬೂಬಕರ್ ಕೃಷ್ಣಾಪುರ, ಪಿ.ಕೆ ಸುರೇಶ್, ಸಿ ಎ ರಹೀಂ, ಶಿವಣ್ಣ, ದಿ.ಆರ್. ನಾರಾಯಣ್, ಕೋಡಿಜಾಲ್ ಇಬ್ರಾಹಿಂ, ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ, ಕವಿತ ಸನಿಲ್, ಯೂತ್ ಇಂಟಕ್ ನ ಪುನೀತ್ ಶೆಟ್ಟಿ, ಚಿರಂಜೀವಿ ಅಂಚನ್ , ವಿನೋದ ರಾಜ್ ಪಣಂಬೂರು, ಯೂತ್ ಇಂಕಟ್ ಮುಖಂಡರು, ಮನಪಾ ಸದಸ್ಯರು ಉಪಸ್ಥಿತರಿದ್ದರು. ಬೊಂಡಾಲ ಚಿತ್ತರಂಜನ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯುವ ಇಂಕಟ್ ರಾಜ್ಯ ಕಾರ್ಯದರ್ಶಿ, ನ್ಯಾಯವಾದಿ ದಿನಕರ್ ಶೆಟ್ಟಿ ಗಣ್ಯರನ್ನು ಸ್ವಾಗತಿಸಿದರು. ಸಾಹಿಲ್ ರೈ ನಿರೂಪಿಸಿದರು

Leave a Reply

Your email address will not be published. Required fields are marked *

error: Content is protected !!