ಉಡುಪಿ: ಸಹಕಾರಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ಅವಕಾಶಗಳನ್ನು ಕೊಡಬೇಕು: ಕೆ.ಪಿ ಸುಚರಿತ ಶೆಟ್ಟಿ

ಉಡುಪಿ ನ.17 (ಉಡುಪಿ ಟೈಮ್ಸ್ ವರದಿ) : 69 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ 4 ನೇ ದಿನದ ಕಾರ್ಯಕ್ರದ ಅಂಗವಾಗಿ ಆವಿಷ್ಕಾರ ಘೋಷಣೆ ಸ್ಟಾರ್ಟ್ ಆಫ್ ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನದ ಉನ್ನತೀಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ವಿಷಯದ ಕುರಿತ ಕಾರ್ಯಕ್ರಮ ಅಲೆವೂರಿನ ನೆಹರು ಕ್ರೀಡಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಉದ್ಘಾಟಿಸಿರು. ಬಳಿಕ ಮಾತನಾಡಿದ ಅವರು, ರಾಜೇಂದ್ರ ಕುಮಾರ್ ನೇತೃತ್ವದ ಎಸ್‍ಸಿಡಿಸಿಸಿ ಬ್ಯಾಂಕ್ ಇರಬಹುದು ಅಥವಾ ದ.ಕ ಹಾಲು ಒಕ್ಕೂಟದ ವ್ಯವಸ್ಥೆಗಳು ಇರಬಹುದು ಇವುಗಳು ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸುತ್ತಾ ಇದೆ. ಇದರ ಜೊತೆಗೆ ಅವಿಭಜಿತ ಜಿಲ್ಲೆಯಲ್ಲಿ ಬೇರೆ ಬೇರೆ ರೀತಿಯ ಸಹಕಾರಿ ಸಂಸ್ಥೆಗಳು ವಿಶೇಷವಾದ ಸಾಧನೆಯನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಸಹಕಾರಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ಅವಕಾಶಗಳನ್ನು ಕೊಡಬೇಕು. ಹಾಗೂ ಬೇರೆ ಬೇರೆ ವಲಯಗಳಿಂದ ಯುವಕರಿಗೆ ಮಹಿಳೆಯರಿಗೆ ಸ್ವಸಹಾಯ ಗುಂಪುಗಳ ಮೂಲಕ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಾಡಲು ಸಂಘಗಳನ್ನು ರಚಿಸಲು ಉತ್ತೇಜಿಸುವುದರೊಂದಿಗೆ ಇವತ್ತು ತಾಂತ್ರಿಕವಾದ ವಿಜ್ಞಾನದ ಮನಸ್ಸಿನಿಂದ ಯೋಚನೆ ಮಾಡಬೇಕು. ಇಂದು ದ.ಕ ಹಾಲು ಒಕ್ಕೂಟವು ತಾಂತ್ರೀಕ ಉನ್ನತೀಕರಣದ ವಿಚಾರದಲ್ಲಿ ಹಾಲಿನಲ್ಲಿರುವ ಕಲಬೆರಕೆಯನ್ನು ಶೀಘ್ರದಲ್ಲಿ ಕಂಡು ಹಿಡಿಯಬಹುದಾದ ತಾಂತ್ರಿಕ ವ್ಯವಸ್ಥೆ ನಮ್ಮಲ್ಲಿದೆ. ಇಂತಹ ಹತ್ತಾರು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೇರೆ ಬೇರೆ ಸಹಕಾರಿ ಸಂಸ್ಥೆಗಳು ಕೂಡಾ ಉನ್ನತ ಸಾಧನೆ ಮಾಡಬೇಕು ಎಂದು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಹೈನುಗಾರರ, ಕೃಷಿಕರ ಸಮಸ್ಯೆಗಳು ಆ ಕ್ಷೇತ್ರದಲ್ಲಿ ದುಡಿದವರಿಗೆ ಗೊತ್ತಿದೆ. ಹಸಿರು ಪೀಠದ ವಿವಾದ ಆರಂಭಿಸಿದವರು ನಮ್ಮ ಜಿಲ್ಲೆಯವರಲ್ಲ. ಬೇರೆ ಜಿಲ್ಲೆಯಲ್ಲಿ ಎಕರೆ ಗಟ್ಟಲೆ ಗುಡ್ಡೆ ಗಟ್ಟಲೆ ಜಾಗ ಇದೆ. ಅಲ್ಲಿನ ವ್ಯವಸ್ಥೆಗೂ ನಮ್ಮ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸ ವಿದೆ. ಇಂತಹ ವಿಚಾರಗಳನ್ನು ನಮ್ಮ ಅಧಿಕಾರಿ ವರ್ಗದವರು ಜನಪ್ರತಿನಿಧಿಗಳಿಗೆ ಮನದಟ್ಟು ಮಾಡುವಲ್ಲಿ ಸೋತಿದ್ದಾರೆ. ಅದ್ದರಿಂದ ಸಮಸ್ಯೆ ಏರ್ಪಟ್ಟಿದೆ. ಹಸಿರು ಪೀಠ ಆಜ್ಞೆಯನ್ನು ತರುವ ಸಂದರ್ಬದಲ್ಲಿ ಹೋರಾಟ ಮಾಡಿದ್ದು ಉಡುಪಿ ಜಿಲ್ಲೆಯೇ ಮೊದಲು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖಾಂತರ ಹೋರಾಟ ಮಾಡಲಾಯಿತು. ಈ ಹೋರಾಟದ ಫಲವಾಗಿ ಇದು ಈ ಆಜ್ಞೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದರು.

ಹಾಲಿನ ದರ ಹೆಚ್ಚಳವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಂದೆಡೆ 2 ರೂ. ಹಾಲಿನ ದರ ಹೆಚ್ಚಿಸಿದರೆ 3 ರೂ ಪಶು ಆಹಾರದ ದರ ಹೆಚ್ಚಿಸುತ್ತಾರೆ. ಈಗಿನ ಯುವ ಜನತೆಗೆ ಕೃಷಿ ಬೇಕಾಗಿಲ್ಲ. ಯುವಕರು ತಾಂತ್ರಿಕ ಶಿಕ್ಷಣ ಪಡೆದು ಹೊರ ಊರುಗಳಿಗೆ ಹೋಗುತ್ತಿದ್ದಾರೆ. ಇಂತಹ ಯುವಕರು ಹೈನುಗಾರಿಕೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದರೆ ಕೃಷಿಗೆ ಉತ್ತಮ ಬೆಲೆ ಬರಬೇಕು. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ಹೈನುಗಾರಿಕೆ ನಡೆಸಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳು ಇವೆ. ಅತ್ಯಂತ ಕಠಿಣ ಪರಿಶ್ರಮದಲ್ಲಿ ಹೈನುಗಾರಿಕೆ ನಡೆಸಿದರೆ ಮಾತ್ರ ಜೀವನ ಸಾಗಿಸಬಹುದು ಹೊರತು ಸರಕಾರ ನಿಗದಿ ಪಡಿಸಿದ ಮೌಲ್ಯದಿಂದ ಸಾಧ್ಯವಿಲ್ಲ ಎಂದರು. ಹಾಗೂ ಹೈನುಗಾರರ ಸಮಸ್ಯೆಗೆ ಪರಿಹಾರ ಉಡುಪಿಯಿಂದಲೇ ಆರಂಭವಾಗಲಿ ಎಂದರು.

ಹಾಗೂ ಇಂದಿನ ಕಾಲ ಘಟ್ಟದಲ್ಲಿ ಬದಲಾವಣೆ ನಿರಂತರ. ಕೃಷಿಕರೇ ದೇಶದ ಬೆನ್ನೆಲುಬು ಅಂತೇವೆ ಆದರೆ ಕೃಷಿಕರಿಗೆ ಏನು ನೀಡಿದ್ದೇವೆ ನಾವು ಎಂದು ಪ್ರಶ್ನಿಸಿದ ಅವರು ಸಮಸ್ಯೆಗಳ ಬಗ್ಗೆ ಹಾಗೂ ನಮ್ಮ ಬೇಡಿಕೆಗಳ ಬಗ್ಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಹೇಳಿದಾಗ ಸಹಕಾರ ಸಪ್ತಾಹದ 7 ದಿನಗಳ ಕಾರ್ಯಕ್ರಮ ಮೂಲಕ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿ ಸಾರಾಂಶವನ್ನು ರಾಜ್ಯಕ್ಕೆ ಕೇಂದ್ರಕ್ಕೆ ತಲುಪಿಸಿ, ಈ ಮೂಲಕ ಜನರಿಗೆ, ರೈತರಿಗೆ, ಹೈನುಗಾರಿಕೆಗೆ ಉತ್ತಮ ಪ್ರಯೋಜನವಾಗುವ ತೀರ್ಮಾಣ ತೆಗೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸಚಿವರು ಶಾಸಕರು ಆಶ್ವಾಸನೆ ನೀಡಿದ್ದಾರೆ ಎಂದು ತಿಳಿಸಿದರು.

ಅಲೆವೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹರೀಶ್ ಕಿಣಿ ಅಲೆವೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಡಾ.ಐ ದೇವಿ ಪ್ರಸಾದ್ ಶೆಟ್ಟಿ ಬೆಳಪು, ಕರ್ನಾಟಕ ರಾಜ್ಯ ಹಾಲು ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ನಿರ್ದೇಶಕ ರಾಜೇಶ್ ರಾವ್ ಪಾಂಗಳ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ನಿರ್ದೇಶಕ ಕೆ. ರವಿರಾಜ್ ಹೆಗ್ಡೆ, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ಅಂಚನ್, ಕೊಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ ಕುಕ್ಕಿಕಟ್ಟೆ ಅಧ್ಯಕ್ಷ ಹರೀಶ್ ಶೇರಿಗಾರ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀ ನಾರಾಯಣ ಜಿ.ಎನ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಲಾವಣ್ಯ ಕೆ.ಆರ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!