ಮಂಗಳೂರು ವಿಮಾನ ನಿಲ್ದಾಣ: ಬಳಕೆದಾರರ ಶುಲ್ಕ ಏರಿಕೆಗೆ ನಿಯಂತ್ರಣ ಪ್ರಾಧಿಕಾರ ತಡೆ

ಮಂಗಳೂರು ನ.17 : ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಧಿಸುವ ಬಳಕೆದಾರರ ಶುಲ್ಕವನ್ನು ಏರಿಸುವ ಬಹು ವರ್ಷಗಳ ಪ್ರಸ್ತಾವಕ್ಕೆ ಅನುಮೋದನೆ ಸಿಗದ ಪರಿಣಾಮ ಶುಲ್ಕ ಏರಿಕೆ ಸದ್ಯಕ್ಕಿಲ್ಲ ಎಂದು ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಸೂಚಿಸಿದೆ.

ಮಂಗಳೂರಿನೊಂದಿಗೆ ಅಹ್ಮದಾಬಾದ್, ಲಕ್ನೋ, ಜೈಪುರ, ಗುವಾಹಟಿ, ತಿರುವನಂತಪುರ ಹಾಗೂ ಶ್ರೀನಗರ ವಿಮಾನ ನಿಲ್ದಾಣಗಳ ಶುಲ್ಕ ಪರಿಷ್ಕರಣೆಗೆ ಪ್ರಸ್ತಾವಿಸಲಾಗಿತ್ತು. ಈ ಪೈಕಿ ಮಂಗಳೂರು, ಅಹ್ಮದಾಬಾದ್, ಲಕ್ನೋ ಹಾಗೂ ಶ್ರೀನಗರ ವಿಮಾನ ನಿಲ್ದಾಣಗಳ ಶುಲ್ಕ ನಿರ್ಧರಣೆ ಪ್ರಕ್ರಿಯೆ ಅಂತಿಮಗೊಳ್ಳದ್ದರಿಂದ ಈಗಿನ ದರಗಳನ್ನೇ 2023ರ ಮಾರ್ಚ್ ಅಥವಾ ಮುಂದಿನ ಆದೇಶದವರೆಗೆ ಮುಂದುವರಿಸಲು
ಎ.ಇ.ಆರ್.ಎ.ಇ ಆದೇಶಿಸಿದೆ.

ತನ್ನ ಮುಂಬರುವ ಅಭಿವೃದ್ಧಿ ಕಾರ್ಯಗಳನ್ನು ಎಂವೈಟಿಪಿ ಪ್ರಸ್ತಾವ ದಲ್ಲಿ ಅದಾನಿ ಏರ್ ಪೋರ್ಟ್ ವಿವರವಾಗಿ ತಿಳಿಸಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಮೊದಲು ಕೈಗೆತ್ತಿಕೊಂಡಿರುವ 300 ಕೋಟಿ ರೂ. ಮೌಲ್ಯದ ವಿಸ್ತರಣ ಕಾಮಗಾರಿಯನ್ನು ಅದಾನಿ ಏರ್ ಪೋರ್ಟ್ ಈಗ ವಹಿಸಿಕೊಂಡಿದೆ, ಅಲ್ಲದೆ 500 ಕೋಟಿ ರೂ. ಮೊತ್ತದ ಹೆಚ್ಚುವರಿ ಅಭಿವೃದ್ಧಿ ಕಾಮಗಾರಿಗಳನ್ನೂ ಅದು ಮುಂದಿನ 5 ವರ್ಷಗಳಲ್ಲಿ ಕೈಗೊಳ್ಳಲಿದೆ. ಸುರಕ್ಷೆ ಹಾಗೂ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ಕಾಗಿ ಬಳಕೆದಾರರ ಶುಲ್ಕದಲ್ಲಿ ಏರಿಕೆಯನ್ನು ಪ್ರಸ್ತಾವಿಸಲಾಗಿದೆ. ಹಾಗೂ ಪ್ರಸ್ತಾವದಲ್ಲಿರುವ ಮತ್ತೂಂದು ಗಮನಾರ್ಹ ಅಂಶವೆಂದರೆ ಮಂಗಳೂರಿಗೆ ಆಗಮಿಸುವವರಿಗೂ ಶುಲ್ಕ. ಇದುವರೆಗೆ ಇಲ್ಲಿಂದ ತೆರಳುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾತ್ರವೇ ಬಳಕೆದಾರ ಶುಲ್ಕ ವಿಧಿಸಲಾಗುತ್ತಿತ್ತು. ಹೊಸ ಪ್ರಸ್ತಾವದಂತೆ ಆಗಮಿಸುವ ಪ್ರಯಾಣಿಕರಿಗೂ ತಲಾ 250 ರೂ. ಶುಲ್ಕ ವಿಧಿಸುವ ಪ್ರಸ್ತಾವಿಸಿದೆ ಎಂದು ತಿಳಿದು ಬಂದಿದೆ.

ಕಳೆದ ಆಗಸ್ಟ್ ನಲ್ಲಿ ಅದಾನಿ ಸಮೂಹ ನಿರ್ವಹಣೆಯ ಆಡಳಿತ ಮಂಗಳೂರು ವಿಮಾನ ನಿಲ್ದಾಣದಲ್ಲಿ ದೇಶೀಯ ಪ್ರಯಾಣಿಕರಿಗೆ ತಲಾ 100 ರೂ. (ಇದೇ ಅಕ್ಟೋಬರ್ 1ರಿಂದ) ಏರಿಸಲು ಅನುಮತಿ ಕೋರಿತ್ತು. ಪ್ರಸ್ತುತ ಈ ಶುಲ್ಕ 150 ರೂ. ಇದೆ. ಈ ಬಹುವರ್ಷೀಯ ಶುಲ್ಕ ಪ್ರಸ್ತಾವದ ಪ್ರಕಾರ ಮಾರ್ಚ್ 31, 2026ರ ವೇಳೆಗೆ ಈ ದರವನ್ನು 725 ರೂ.ಗೆ ಏರಿಸುವ (ಪ್ರತೀ ವರ್ಷಕ್ಕೊಮ್ಮೆ ಏರಿಕೆ) ಉದ್ದೇಶವಿದೆ. ಹಾಗೆಯೇ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪ್ರತೀ ವರ್ಷ ಏರಿಸುತ್ತ ಹೋಗಿ 2026ರ ವೇಳೆಗೆ 1,200 ರೂ. ಶುಲ್ಕ ವಿಧಿಸುವ ಉದ್ದೇಶವಿದೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!