ಆಗುಂಬೆ ಘಾಟಿ ವಿಸ್ತರಿಸುವ ಇಚ್ಚಾ ಶಕ್ತಿ‌ ತೋರದ ಸಂಸದೆ ಹಾಗೂ ಸಚಿವ- ವೀರಪ್ಪ ಮೊಯ್ಲಿ

ಹೆಬ್ರಿ ನ.16 (ಉಡುಪಿ ಟೈಮ್ಸ್ ವರದಿ) : ಆಗುಂಬೆ ಘಾಟಿಯನ್ನು ವಿಸ್ತರಣೆ ಮಾಡಿ ಉಳಿದ ಕೆಲಸ ಮಾಡಬೇಕಿದೆ. ಆದರೆ ಸಚಿವ ಸುನಿಲ್ ಕುಮಾರ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರ ಇಚ್ಚಾಶಕ್ತಿ ಕೊರತೆಯಿಂದ ಆಗುಂಬೆಘಾಟಿಯ ವಿಚಾರವನ್ನೇ ತೆಗೆಯುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಅವರು ಹೇಳಿದ್ದಾರೆ.

ಅವರು ಹೆಬ್ರಿಯ ಚೈತನ್ಯ ಯುವ ವೃಂದದ ಒಳಾಂಗಣ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಅಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವನಾಗಿದ್ದಾಗ ಆಗುಂಬೆ ಘಾಟಿಯ ವಿಸ್ತರಣೆಯ ಎಲ್ಲಾ ತೊಡಕುಗಳನ್ನು ನಿವಾರಣೆ ಮಾಡಿ ಮಲ್ಪೆ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ಮಂಜೂರು ಮಾಡಿ ಸಾಕಷ್ಟು ಅನುದಾನವನ್ನು ಮೀಸಲಿಟ್ಟಿದ್ದೇವು. ಆಗುಂಬೆ ಘಾಟಿಯನ್ನು ವಿಸ್ತರಣೆ ಮಾಡಿ ಉಳಿದ ಕೆಲಸ ಮಾಡಬೇಕಿದೆ. ಆದರೆ ಸಚಿವ ಸುನಿಲ್ ಕುಮಾರ್ ಮತ್ತು ಸಂಸದೆ ಶೋಭಾ ಕರಂದ್ಲಾಜೆಗೆ ಇಚ್ಚಾಶಕ್ತಿ ಇಲ್ಲ, ಹಾಗಾಗಿ ಆಗುಂಬೆಘಾಟಿಯ ವಿಚಾರವನ್ನೇ ತೆಗೆಯುತ್ತಿಲ್ಲ. ಆವರಿಗೆ ಯಾವೂದೂ ಬೇಕಿಲ್ಲ ಎಂದರು.

ರಾಜ್ಯದಲ್ಲೆಯೂ ಕಾಂಗ್ರೆಸ್ ಪಕ್ಷದ ಪರವಾದ ಅಲೆಯಿದೆ ಎಂದ ಅವರು, ನಾವು ಕಾರ್ಕಳ ಕ್ಷೇತ್ರಕ್ಕೆ ಏನು ಮಾಡಿದ್ದೇವೆ ಎಂದು ಎಲ್ಲರಿಗೂ ಗೊತ್ತು. ಆ ಕಾಲದ ಅಂದಿನ ಅಗತ್ಯಗಳಾದ ಶಿಕ್ಷಣ, ರಸ್ತೆ, ಸೇತುವೆ, ಬಡವರಿಗೆ ಮನೆ ನಿವೇಶನ ಸಹಿತ ಎಲ್ಲವನ್ನೂ ಕೊಟ್ಟು ಕ್ಷೇತ್ರದ ನನ್ನ ಜನರ ಋಣವನ್ನು ತೀರಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಜನಸಾಮಾನ್ಯರ ಬದುಕಿಗಾಗಿ ಕಾಂಗ್ರೆಸ್ ಪಕ್ಷ ಅನಿವಾರ್ಯ ಎಂದು ಈಗ ಮತ್ತೋಮ್ಮೆ ಎಲ್ಲರಿಗೂ ಅರ್ಥವಾಗತೊಡಗಿದೆ. ರಾಜ್ಯದಲ್ಲಿ ಸರ್ಕಾರವು ನಮ್ಮದೆ ಬರುತ್ತದೆ. ಕಾರ್ಕಳದಲ್ಲಿಯೂ ಮತ್ತೆ ಕಾಂಗ್ರೆಸ್ ವೈಭವ ಕಾಣಲಿದೆ. ಅದಕ್ಕಾಗಿ ನಾನೇ ಗ್ರಾಮಗ್ರಾಮಕ್ಕೆ ಬಂದು ಕೆಲಸ ಮಾಡುವೆ. ಎಲ್ಲರೂ ಒಂದಾಗಿ ಪಕ್ಷವನ್ನು ವಿಜಯದತ್ತ ಮುನ್ನಡೆಸುವ ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿಯವರಿಗೆ ಬಣ್ಣ, ಕೋಮುಭಾವನೆ ಕೆರಳಿಸುವುದೇ ಕೆಲಸ ಎಂದ ಅವರು, ಈಗ ಶಾಲೆಗೆ ಬಣ್ಣ ಬಳಿದು ಧ್ವೇಷದ ಭಾವನೆ ಬಿತ್ತಲು ಹೊರಟಿದ್ದಾರೆ. ಕಳೆದ 2 ವರ್ಷದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಆ ಬಗ್ಗೆ ಚಿಂತನೆ ನಡೆಸಿ ಮಕ್ಕಳ ಭವಿಷ್ಯದ ಬಗೆಗೆ ಹೊಸ ಯೋಚನೆ ಯೋಜನೆ ಇಲ್ಲ. ಕೇಸರಿ ಪವಿತ್ರ ಬಣ್ಣ. ನಮಗೆ ಕೇಸರಿಯ ಬಗ್ಗೆ ಆಕ್ಷೇಪವಿಲ್ಲ. ರಾಷ್ಟ್ರಧ್ವಜದಲ್ಲೂ ಕೇಸರಿ ಇದೆ. ಕೇಸರಿಯ ಮೂಲಕ ಸಾರ್ವಜನಿಕರಲ್ಲಿ ಧ್ವೇಷದ ಭಾವನೆ ಮೂಡಿಸುತ್ತಿರುವುದಕ್ಕೆ ನಮ್ಮ ಆಕ್ಷೇಪ ಎಂದು ಹೇಳಿದರು. ಹಾಗೂ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳಿಂದ ಅರ್ಜಿ ಪಡೆಯುವುದು ಹೊಸ ಪದ್ಧತಿ ಅಲ್ಲ. ಅವರ ಸಾಧನೆ ತಿಳಿಯಲು ಅರ್ಜಿ ಆಹ್ವಾನಿಸುವುದು ಒಳ್ಳೇಯ ಕ್ರಮ, ಅದಕ್ಕಾಗಿ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ಧನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್ ಕಬ್ಬಿನಾಲೆ, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ಮುಖಂಡರಾದ ಶೀನ ಪೂಜಾರಿ, ಪ್ರವೀಣ್ ಬಲ್ಲಾಳ್, ಕಾರ್ಕಳದ ಸುರೇಂದ್ರ ಶೆಟ್ಟಿ ಸಹಿತ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.

error: Content is protected !!