ಹೆಬ್ರಿ ರಸ್ತೆಗೆ ಮದ್ಯದ ಬಾಟಲಿ ಎಸೆದ ದುಷ್ಕರ್ಮಿ: ಕಾನೂನು ಕ್ರಮಕ್ಕೆ ಆಗ್ರಹ

ಹೆಬ್ರಿ ನ.15 (ಉಡುಪಿ ಟೈಮ್ಸ್ ವರದಿ) : ಕಿಡಿಗೇಡಿಗಳು ಸಾರ್ವಜನಿಕರು ಸಂಚರಿಸುವ ದಾರಿ ಮೇಲೆ ಬೀಯರ್ ಹಾಗೂ ಮದ್ಯದ ಬಾಟಲಿಗಳ ಒಡೆದ ಚೂರುಗಳನ್ನು ಎಸೆದು ವಿಕೃತಿ ಮೆರೆದಿರುವ ಘಟನೆ ಹೆಬ್ರಿ ಗ್ರಾಮದ ನಡುಬೀಡಿನಲ್ಲಿ ನಡೆದಿದೆ.
ಸುಮಾರು ನೂರು ಮೀಟರ್ ನಷ್ಟು ದೂರ ರಸ್ತೆ ತುಂಬಾ ಗಾಜಿನ ಚೂರುಗಳು ಎಸೆದಿದ್ದು, ಸಾರ್ವಜನಿಕರಿಗೆ ನಡೆದಾಡಲು ತೊಂದರೆ ಅನುಭವಿಸುವಂತಾಗಿದೆ. ಇಂತಹ ಹೇಯ ಕೃತ್ಯ ಮಾಡಿದವರು ಯಾರೇ ಆಗಿರಲಿ ಅವರಿಗೆ ಪೊಲೀಸ್ ಇಲಾಖೆ ಸರಿಯಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಹೆಬ್ರಿ ತಾಲ್ಲೂಕು ಘಟಕ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ ಹಾಗೂ ಹೆಬ್ರಿ ಗ್ರಾ.ಪಂ ಮಾಜಿ ಅಧ್ಯಕ್ಷ ಗುಳಿಬೆಟ್ಟು ಸುರೇಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ರಸ್ತೆಯನ್ನೇ ಅವಲಂಬಿಸಿ ಸುಮಾರು 8 ಮನೆಗಳಿವೆ. ದಿನನಿತ್ಯ ಈ ದಾರಿಯಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಿರುಗಾಡುತ್ತಾರೆ. ಆದರೆ ವೈಯಕ್ತಿಕ ದ್ವೇಷದಿಂದ ಈ ರಸ್ತೆಯಲ್ಲಿ ಯಾರು ತಿರುಗಾಡ ಬಾರದೆಂದು ಮೂಲತಃ ಉಡುಪಿ ಪಾಂಗಳದ ಶೋಧನ್ ಶೆಟ್ಟಿ ಹಾಗೂ ಇತನ ಸಂಬಂಧಿಗಳು ಈ ಕೃತ್ಯ ಮಾಡಿದ್ದಾರೆ ಎಂದು ಶೋಧನ್ ಶೆಟ್ಟಿ ಸಂಬಂಧಿ ನಡುಬೀಡು ವಸಂತ ಶೆಟ್ಟಿ ಅವರು ಆರೋಪಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಈ ದಾರಿಯಲ್ಲಿ ನಾವೆಲ್ಲ ಸಂಚರಿಸುತ್ತಿದ್ದೇವೆ. ಆದರೆ ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಿದ್ದಾರೆ ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದೇವೆ. ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಸಂತ ಶೆಟ್ಟಿ ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.