ನ.20: ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ ನ.12(ಉಡುಪಿ ಟೈಮ್ಸ್ ವರದಿ): ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಹಾಗೂ ಜಾನಪದ ಕಲಾವಿದ ಪ್ರಶಸ್ತಿ ಪ್ರಧಾನ ಸಮಾರಂಭ ಉಡುಪಿ ಚಿಟ್ಟಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್‍ನ ಲಕ್ಷ್ಮೀ ಸಭಾಭವನದಲ್ಲಿ ನ.20 ರಂದು ಬೆಳಿಗ್ಗೆ 10.00 ಗಂಟೆಗೆ ಜರಗಲಿದೆ ಎಂದು ಯುವವಾಹಿನಿ ಉಡುಪಿ ಘಟಕದ ಸಂಚಾಲಕ ಭಾಸ್ಕರ ಸುವರ್ಣ ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಹಿರಿಯ ಜಾನಪದ ವಿದ್ವಾಂಸರೂ, ಸಂಶೋಧಕರೂ ಆದ ಕೆ.ಎಲ್. ಕುಂಡಂತಾಯ ಇವರಿಗೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ, ಕಲಾಪೋಷಕ ಎಸ್.ಕೆ. ಸಾಲ್ಯಾನ್ ಬೆಳ್ಮಣ್ ಇವರಿಗೆ ನೀಡಿ ಗೌರವಿಸಲಾಗುತ್ತದೆ. ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ತುಕಾರಾಮ್ ಪೂಜಾರಿಯವರು ಪ್ರಶಸ್ತಿ ಪ್ರಧಾನ ಮಾಡಲಿದ್ದು, ಪ್ರಶಸ್ತಿಯು ತಲಾ ರೂ.12,000 ರೂ. ನಗದಿನೊಂದಿಗೆ, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ಗೌರವ ಪುರಸ್ಕಾರವನ್ನು ಆಪದ್ಭಾಂಧವ, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಖ್ಯಾತ ಭಜನಾ ಕಲಾವಿದ ಬಹುಮುಖ ಪ್ರತಿಭೆ ಸುರೇಶ್ ಆಚಾರ್ಯ ಕಿದಿಯೂರು ಇವರಿಗೆ ನೀಡಿ ಗೌರವಿಸಲಾಗುತ್ತದೆ. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ಮಹಾಬಲ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಮಿತಿಯ ಒಂದನೇ ಉಪಾಧ್ಯಕ್ಷರಾದ ರಾಜೇಶ್ ಬಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.

ಹಾಗೂ ಪ್ರಶಸ್ತಿಯನ್ನು ಕೆಮ್ಮಲಜೆ ಜಾನಪದ ಪ್ರಕಾಶನವು 8 ವರ್ಷಗಳಿಂದ ನೀಡುತ್ತಾ ಬರುತ್ತಿದ್ದು, ಕಳೆದ 3 ವರ್ಷಗಳಿಂದ ಯುವವಾಹಿನಿ ಉಡುಪಿ ಘಟಕವು ನೀಡುತ್ತಿದೆ. ಮಂಗಳೂರು ಕೇಂದ್ರ ಸಮಿತಿಯು ದಿ| ವಿಶು ಕುಮಾರ್ ಸಾಹಿತ್ಯ ಪ್ರಶಸ್ತಿಯನ್ನು ಹಲವಾರು ವರ್ಷಗಳಿಂದ ನೀಡುತ್ತಿದ್ದು, ಘಟಕಗಳಲ್ಲಿ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಿರುವುದು ಉಡುಪಿ ಘಟಕ ಮಾತ್ರವಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಹಿರಿಯ ಜಾನಪದ ವಿದ್ವಾಂಸರೂ, ಸಂಶೋಧಕರೂ ಆದ ಕೆ.ಎಲ್. ಕುಂಡಂತಾಯ ಇವರಿಗೆ ನೀಡಲಿದ್ದು, ಇವರು ತುಳು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚರಣೆ, ನಡೆ-ನುಡಿ-ವಿಚಾರಗಳ ದಾಖಲೀಕರಣ, ಅಧ್ಯಯನ, ಕನ್ನಡ ಸಾಹಿತ್ಯ, ಯಕ್ಷಗಾನ, ನಾಟಕಗಳಲ್ಲಿ ಸೃಜನಶೀಲತೆಯಿಂದ ತೊಡಗಿಸಿಕೊಳ್ಳುವಿಕೆ ಮತ್ತು ಜಾನಪದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕರಾವಳಿಯ ನಾಗಾರಾಧನೆ’ ಕುರಿತು ವಿಸ್ತ್ರತ ಕ್ಷೇತ್ರಕಾರ್ಯ, ಕೃತಿರಚನೆ, ಉಪನ್ಯಾಸ ದಾಖಲೀಕರಣ ಮಾಡಿದ್ದಾರೆ. ದೈವಾರಾಧನೆಯ ಸಮಗ್ರ ಅವಲೋಕನ, ಗೋಷ್ಠಿಗಳಲ್ಲಿ ಭಾಗವಹಿಸಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ದೇವಾಲಯ ಕುರಿತು ಅಧ್ಯಯನ ನಡೆಸಿದ್ದು, ಸುಮಾರು 100ಕ್ಕೂ ಹೆಚ್ಚು ದೇವಾಲಯಗಳ ಜಾನಪದ, ಪೌರಾಣಿಕ, ಐತಿಹಾಸಿಕ ಹಿನ್ನೆಲೆಯನ್ನು ನಿರೂಪಿಸಿದ್ದಾರೆ. ಸಿರಿ ಕಥಾನಕದ ಅಧ್ಯಯನವನ್ನು ಸಮಗ್ರವಾಗಿ ಮಾಡಿದ್ದಾರೆ. ಪ್ರಸಿದ್ಧ ದೇವಾಲಯಗಳ ಏಳು ಪರಿಚಯ ಪುಸ್ತಕ ಸೇರಿದಂತೆ, ನಂಬಿಕೆ, ನಡವಳಿಕೆ, ಪರ್ವಕಾಲ, ಮಾರ್ನೆಮಿ, ನವನವದುರ್ಗಾ ಸೊಡರ ಹಬ್ಬ, ಧರ್ಮ ಜಾಗರ, ನಡುವಣ ಲೋಕದ ನಡೆ, ದೇವಾರಾಧನೆ ನೆಲೆ-ಕಲೆ, ಸಿರಿನಡೆ ಪೇರೂರು ಆಲಡೆ ಕೃತಿಯನ್ನು ರಚಿಸಿದ್ದಾರೆ.

ಇನ್ನು ಜಾನಪದ ಕಲಾವಿದ ಪ್ರಶಸ್ತಿಯನ್ನು ಪ್ರಗತಿಪರ ಕೃಷಿಕ, ಕಲಾಪೋಷಕ ಎಸ್.ಕೆ. ಸಾಲ್ಯಾನ್ ಬೆಳ್ಮಣ್ ಇವರಿಗೆ ನೀಡಲಿದ್ದು, ಇವರು ಯಶಸ್ವಿ ಉದ್ಯಮಿ ಯಾಗಿದ್ದರೂ ಸ್ವಂತ ಪರಿಶ್ರಮದಿಂದ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹಸಿರು ಭೂಮಿಯ ಹರಿಕಾರರಾಗಿದ್ದಾರೆ. ಸಾಂಪ್ರದಾಯಿಕ ಕೃಷಿ ಕ್ಷೇತ್ರವನ್ನು ಇನ್ನೂ ಉಳಿಸಿಕೊಂಡು, ಅದರಲ್ಲಿ ನೂರಾರು ರೈತರುಗಳ ಸಹಭಾಗಿತ್ವದೊಂದಿಗೆ ಫಲವತ್ತಾದ ಫಸಲನ್ನು ತೆಗೆಯುತ್ತಿದ್ದಾರೆ. ಕೃಷಿ ರಂಗದ ವಿಶಿಷ್ಟ ಸಾಧನೆಯ ಜೊತೆಗೆ ಮಹಾನ್ ಕಲಾಪೋಷಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರಿಗೆ ಹಲವಾರು ಬಾರಿ ‘ಶ್ರೇಷ್ಠ ಕೃಷಿ ಸಾಧಕ’, ‘ಉತ್ತಮ ರೈತ’ ಪ್ರಶಸ್ತಿ ದೊರಕಿದ್ದು, ಕೃಷಿ ಸೇರಿದಂತೆ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದ ಅನನ್ಯ ಸೇವೆಗಾಗಿ ಈ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಮಹಾಬಲ ಅಮೀನ್, ಕಾರ್ಯದರ್ಶಿ ವಿನೋದ್ ಮಂಚಿ, ರಘುನಾಥ್ ಮಾಬೆನ್, ದಯಾನಂದ್ ಉಗ್ಗೆಲ್ ಬೆಟ್ಟು, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published.

error: Content is protected !!