ಹೆಬ್ರಿ: ಸರಕಾರಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಅಗ್ನಿ ಅವಘಡ- 4 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಹೆಬ್ರಿ ನ.11 : ಸರಕಾರಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ ನಾಲ್ವರು ವಿದ್ಯಾರ್ಥಿಗಳು ತೀವ್ರ ಸ್ವರೂಪದ ಗಾಯಗೊಂಡ ಘಟನೆ ನ.9 ರ ಸಂಜೆ ನಡೆದಿದೆ.

ಹೊರ ಜಿಲ್ಲೆಯಿಂದ ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬಂದ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ಶ್ರೀನಿವಾಸ್, ಅಮರೀಶ್ ಹಾಗೂ ಐದನೆ ತರಗತಿಯ ವಿನೋದ್ ಮತ್ತು ಮನೋಜ್ ಗಾಯಗೊಂಡ ವಿದ್ಯಾರ್ಥಿಗಳು. ಇವರನ್ನು ಆಸ್ಪತ್ರೆಗೆ ದಾಖಲಿಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗಾಯಗೊಂಡ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ತಿಳಿಸಿದ್ದಾರೆ.

ಹಾಸ್ಟೆಲ್ ನ ಹಿಂಭಾಗದಲ್ಲಿ ಕಸ ಗಳಿಗೆ ಬೆಂಕಿ ಹಚ್ಚುವ ವೇಳೆ ಸ್ಯಾನಿಟೈಸರ್ ಬಾಟಲಿಗೆ ಬೆಂಕಿ ತಗುಲಿ ಸ್ಫೋಟಗೊಂಡ ಪರಿಣಾಮ ಈ ಅವಘಡ ಸಂಭವಿಸಿದೆ. ಇಲ್ಲಿ ಒಟ್ಟು ಐವತ್ತು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಘಟನೆಯ ಸಂದರ್ಭದಲ್ಲಿ ಹಾಸ್ಟೆಲ್ ನಲ್ಲಿ ವಾರ್ಡನ್ ಇಲ್ಲದ ಕಾರಣ ಅಡುಗೆ ಸಹಾಯಕಿ ಒಬ್ಬರೆ ಇದ್ದರು. ವಾರ್ಡನ್ ಅವರ ಪರಿಚಯಸ್ಥರ ವಾಹನದಲ್ಲಿ ನಾಲ್ವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದ್ದ ಕಾರಣ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗುರುವಾರ ಸಂಜೆ ಹಾಸ್ಟೆಲ್ ಗೆ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಣೇಶ್ ಕುಮಾರ್. ಮಾಜಿ ಅಧ್ಯಕ್ಷರುಗಳಾದ ಸುಧಾಕರ್ ಹೆಗ್ಡೆ. ಎಚ್ .ಕೆ ಸುಧಾಕರ್, ಸದಸ್ಯರಾದ ಕೃಷ್ಣ ನಾಯ್ಕ , ತಾರನಾಥ್ ಬಂಗೇರ ಭೇಟಿ ನೀಡಿ ಘಟನೆಯ ವಿವರ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣ ಬೆಳಕಿಗೆ ಬರಬಾರದು ಎಂದು ವಾರ್ಡನ್ ಅಡುಗೆ ಸಹಾಯಕಿ ರವರಿಗೆ ತಾಕೀತು ಮಾಡಿದ್ದರು ಎನ್ನಲಾಗಿದ್ದು, ಘಟನೆ ಬಗ್ಗೆ ಮರುದಿನ ಮಧ್ಯಾಹ್ನ ತನಕ ಸ್ಥಳೀಯ ಪಂಚಾಯತ್ ಸೇರಿದಂತೆ ಯಾರಿಗೂ ಮಾಹಿತಿ ಇರಲಿಲ್ಲ. ಘಟನೆಗೆ ವಾರ್ಡನ್ ನೇರ ಹೊಣೆ ಯಾಗುತ್ತಾರೆ. ಸಂಬಂಧಪಟ್ಟವರು ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೆಬ್ರಿ ಗ್ರಾ.ಪಂ ಅಧ್ಯಕ್ಷೆ ಮಾಲತಿ ತಿಳಿಸಿದ್ದಾರೆ.

ಹಾಗೂ ರಾಜ್ಯದೆಲ್ಲೆಡೆಯಿಂದ ಬಡ ವಿದ್ಯಾರ್ಥಿಗಳು ಇಲ್ಲಿದ್ದಾರೆ ಅವರ ಬಗ್ಗೆ ಇಲಾಖೆ ನಿರ್ಲಕ್ಷ ತೋರುತ್ತಿದೆ ರಾತ್ರಿಹೊತ್ತು ನೋಡಿಕೊಳ್ಳಲು ಯಾರೂ ವಾರ್ಡನ್ ಇರುವುದಿಲ್ಲ ಎಂದು ಗ್ರಾಂ.ಪಂ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಹೇಳಿದ್ದಾರೆ.

Leave a Reply

Your email address will not be published.

error: Content is protected !!