ಉಡುಪಿ: ಕೊರಂಗ್ರಪಾಡಿಯ ಮನೆಗೆ ನುಗ್ಗಿ 63 ಸಾವಿರ ಮೌಲ್ಯದ ನಗ-ನಗದು ಕಳವು

ಉಡುಪಿ ನ.11 (ಉಡುಪಿ ಟೈಮ್ಸ್ ವರದಿ) : ತಾಲೂಕಿನ ಕೊರಂಗ್ರಪಾಡಿಯ ಬೊಬ್ಬನಪಾದೆ ಶೆಟ್ಟಿ ಕಂಪೌಂಡ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 63 ಸಾವಿರ ರೂ ಮೌಲ್ಯದ ನಗ-ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಕೊರಂಗ್ರಪಾಡಿಯ ಬೊಬ್ಬನಪಾದೆ ಶೆಟ್ಟಿ ಕಂಪೌಂಡ್ ನ ನಿವಾಸಿ ಪ್ರಸಾದ್ ಪೂಜಾರಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಅಶ್ವಿನ್ ಪೀರೇರ ಎಂಬವರ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದರು. ನ.10 ರಂದು ಬೆಳಗ್ಗೆಯಿಂದ ಸಂಜೆ ಅವಧಿಯಲ್ಲಿ ಮನೆಯ ಹಿಂಬದಿಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ಮನೆಯೊಳಗಿದ್ದ ಗೋದ್ರೇಜ್ ನ ಲಾಕರ್‍ನಲ್ಲಿದ್ದ 10 ಗ್ರಾಮ್ ತೂಕದ ಚಿನ್ನದ 1 ನೆಕ್ಲೆಸ್ ಹಾಗೂ 18,000 ರೂ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ನಗದು ಸಹಿತ ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 63,000 ರೂ. ಆಗಿರುತ್ತದೆ ಎಂಬುದಾಗಿ ಪ್ರಸಾದ್ ಪೂಜಾರಿ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.