ಐಪಿಎಸ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಿ 15.90 ಲಕ್ಷ ಸುಲಿಗೆ : ದೂರು ದಾಖಲು

ಬೆಂಗಳೂರು ನ.11 : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯೊಂದಿಗಿನ ಫೋಟೋ, ವಿಡಿಯೋ ಇಟ್ಟುಕೊಂಡು ಯುವಕನೋರ್ವನಿಗೆ ಐಪಿಎಸ್ ಅಧಿಕಾರಿ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಿ 15.90 ಲಕ್ಷ ಸುಲಿಗೆ ಮಾಡಿರುವ ಬಗ್ಗೆ ತಿಲಕ್‌ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

‘ ಈ ಬಗ್ಗೆ ಚಾಮರಾಜಪೇಟೆ ನಿವಾಸಿ 20 ವರ್ಷದ ಯುವಕ, ಆರೋಪಿಗಳು ಎನ್ನಲಾದ ಸುನೀಲ್, ಹೇಮಂತ್ ಹಾಗೂ ಪ್ರವೀಣ್ ಎಂಬುವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. 

‘ಆರೋಪಿಗಳು ಯುವಕನ ಸ್ನೇಹಿತರಾಗಿದ್ದು, ಯುವಕ ನೀಡಿದ್ದ ಫೋಟೊ ಹಾಗೂ ವಿಡಿಯೋವನ್ನು ದುರ್ಬಳಕೆ ಮಾಡಿಕೊಂಡು, 15.90 ಲಕ್ಷ ನಗದು ಹಾಗೂ 99 ಗ್ರಾಂ ಚಿನ್ನಾಭರಣ ದೋಚಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಪ್ರಕರಣವನ್ನು ಚಾಮರಾಜಪೇಟೆ ಠಾಣೆಗೆ ವರ್ಗಾಯಿಸಲಾಗಿದೆ’ ಎಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆ…

ಇನ್‌ಸ್ಟಾಗ್ರಾಂನಲ್ಲಿ ಖಾತೆ ಹೊಂದಿದ್ದ ಯುವಕನಿಗೆ, ಚಾಂದಿನಿ ಎಂಬ ಯುವತಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅದನ್ನು ಯುವಕ ಸ್ವೀಕರಿಸಿದ್ದು, ನಂತರ ಇಬ್ಬರು ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು’.

‘ದಿನ ಕಳೆದಂತೆ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ವಿಡಿಯೋ ಕರೆ ಮಾಡಲಾರಂಭಿಸಿದ್ದ ಯುವತಿ, ಲೈಂಗಿಕವಾಗಿ ಪ್ರಚೋದಿಸುವ ರೀತಿಯಲ್ಲಿ ಮಾತನಾಡುತ್ತಿದ್ದು, ಯುವಕ, ಯುವತಿ ಜೊತೆ ಮಾತನಾಡುತ್ತಲೇ ಬೆತ್ತಲಾಗುತ್ತಿದ್ದರು. ಇದೇ ಸಂದರ್ಭದಲ್ಲೇ ಯುವತಿ, ದೂರುದಾರ ಯುವಕನ ಬೆತ್ತಲೆ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಟ್ಟುಕೊಂಡಿದ್ದರು. ಅವುಗಳನ್ನು ದೂರುದಾರರಿಗೂ ಕಳುಹಿಸಿದ್ದರು’ ಎನ್ನಲಾಗಿದೆ.

ನೇರವಾಗಿ ಭೇಟಿಯಾಗಿ ಖಾಸಗಿ ಕ್ಷಣ ಕಳೆಯುವಂತೆ ಯುವತಿ ಒತ್ತಾಯಿಸಿದ್ದರು. ಅದಕ್ಕೆ ಯುವಕ ಒಪ್ಪಿರಲಿಲ್ಲ. ಸಿಟ್ಟಾದ ಯುವತಿ, ಫೋಟೊ-ವಿಡಿಯೊ ಇರುವುದಾಗಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದಳು. ಹೆದರಿದ್ದ ದೂರುದಾರ ಯುವಕ, ಯುವತಿಯನ್ನು ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದರು. ಇದೇ ಸಂಗತಿಯನ್ನು ದೂರುದಾರ ಯುವಕ, ಆರೋಪಿಗಳಾದ ಸ್ನೇಹಿತರಿಗೆ ತಿಳಿಸಿದ್ದರು. ಜೊತೆಗೆ, ಯುವತಿ ಜೊತೆಗಿನ ಸಲುಗೆ ವಿಡಿಯೊ- ಫೋಟೊಗಳನ್ನೂ ಸ್ನೇಹಿತರಿಗೆ ಕಳುಹಿಸಿದ್ದರು’.

ಈ ನಡುವೆ ‘ ಫೋಟೋ ವಿಡಿಯೋಗಳನ್ನು ತಮ್ಮಲ್ಲೇ ಹಂಚಿಕೊಂಡಿದ್ದ ಆರೋಪಿಗಳು, ಅವುಗಳನ್ನು ಇಟ್ಟುಕೊಂಡು ಸ್ನೇಹಿತನಾದ ದೂರುದಾರರನ್ನೇ ಬ್ಲ್ಯಾಕ್‌ ಮೇಲ್ ಮಾಡಿ ಹಣ ಸುಲಿಗೆ ಮಾಡಲು ಸಂಚು ರೂಪಿಸಿದ್ದರು’. ಅದರಂತೆ, ದೂರುದಾರರಿಗೆ ಕರೆ ಮಾಡಿದ್ದ ಸ್ನೇಹಿತರು, ‘ನನಗೆ ಪರಿಚಯವಿರುವ ಐಪಿಎಸ್ ಅಧಿಕಾರಿಯೊಬ್ಬರು ಕರೆ ಮಾಡಿದ್ದರು. ನಿನ್ನ ಬೆತ್ತಲೆ ಫೋಟೊ ವಿಡಿಯೊ ಸಮೇತ ಯುವತಿಯೊಬ್ಬರು ದೂರು ನೀಡಿರುವುದಾಗಿ ಅವರು ಹೇಳುತ್ತಿದ್ದಾರೆ. ಹಣ ನೀಡಿದರೆ ಸಂಧಾನ ಮಾಡಿಸುವುದಾಗಿಯೂ ತಿಳಿಸಿದ್ದಾರೆ’ ಎಂದಿದ್ದರು. ಅದರಿಂದ ಹೆದರಿದ್ದ ದೂರುದಾರ, 99 ಗ್ರಾಂ ಚಿನ್ನದ ಸರ ಕೊಟ್ಟಿದ್ದರು. ಅದನ್ನು ಮಾರಿ ಸಂಧಾನ ಮಾಡಿಸುವಂತೆ ಹೇಳಿದ್ದರು’.

ಆದರೆ ಆರೋಪಿಗಳು 99 ಗ್ರಾಂ ಚಿನ್ನ ಸಾಕಾಗುವುದಿಲ್ಲವೆಂದು ಹೇಳಿ, ಐಪಿಎಸ್ ಅಧಿಕಾರಿ ಹಾಗೂ ಸಿಸಿಬಿ ಪೊಲೀಸರ ಹೆಸರು ಹೇಳಿ ಹಂತ ಹಂತವಾಗಿ 15.90 ಲಕ್ಷ ರೂ. ಸುಲಿಗೆ ಮಾಡಿದ್ದರು. ಇದಾದ ನಂತರ ಪುನಃ ಹಣ ಕೇಳಿದ್ದರು. ಬೇಸತ್ತ ಸಂತ್ರಸ್ತ ಯುವಕ ಠಾಣೆಗೆ ಬಂದು ಸ್ನೇಹಿತರ ವಿರುದ್ಧ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

Leave a Reply

Your email address will not be published.

error: Content is protected !!