ಹೆಜಮಾಡಿಯ 2 ಶಿಕ್ಷಣ ಸಂಸ್ಥೆಗಳಲ್ಲಿ ಕಳ್ಳತನ – ದೂರು ದಾಖಲು

ಪಡುಬಿದ್ರಿ ನ.10 (ಉಡುಪಿ ಟೈಮ್ಸ್ ವರದಿ) : ಹೆಜಮಾಡಿಯಲ್ಲಿ ನ.8 ರ ರಾತ್ರಿಯಿಂದ ನ.9 ರ ಬೆಳಗ್ಗಿನ ಅವಧಿಯಲ್ಲಿ ಒಂದೇ ದಿನ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಕಳ್ಳತನ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.

ಹೆಜಮಾಡಿಯ ಸರಕಾರಿ ಪ್ರೌಢ ಶಾಲೆ ಹಾಗೂ ಹೆಜಮಾಡಿ ಗ್ರಾಮದ ಅಲ್-ಅಝ್‍ಹರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳ್ಳತನ ನಡೆದಿದ್ದು, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಕಳ್ಳತನ ನಡೆಯುತ್ತಿರುವ ಬಗ್ಗೆ ಆಗಾಗ ದೂರು ದಾಖಲಾಗುತ್ತಿರುವುದು ಆತಂಕ ಸೃಷ್ಟಿಸಿದೆ.

ನ.8 ರ ರಾತ್ರಿಯಿಂದ ನ.9 ರ ಬೆಳಗ್ಗಿನ ಅವಧಿಯಲ್ಲಿ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರ ಕೊಠಡಿಯ ಬಾಗಿಲಿನ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು. ಕಪಾಟುಗಳ ಬೀಗವನ್ನು ಮುರಿದು ಅದರೊಳಗಿದ್ದ ಅಕ್ಷರ ದಾಸೋಹ ಆಹಾರ ವಸ್ತುಗಳ ಖರೀದಿಗೆಂದು ಇರಿಸಿದ್ದ 15,000 ರೂ. ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಅಲ್ಲದೆ ಹೈಸ್ಕೂಲ್ ಕಟ್ಟಡದಲ್ಲಿರುವ ಕಾಲೇಜು ವಿಭಾಗದ ಹಳೆಯ ಕಂಪ್ಯೂಟರ್, ಇನ್ವರ್ಟರ್, ಬ್ಯಾಟರಿಗಳಿರುವ ಕೊಠಡಿಯ ಬಾಗಿಲಿನ ಬೀಗವನ್ನು ಮುರಿದು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ ಎಂಬುದಾಗಿ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿ ಸಂಪಾವತಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತೊಂದೆಡೆ ಅದೇ ದಿನ ಹೆಜಮಾಡಿಯ ಅಲ್-ಅಝ್‍ಹರ್ ಆಂಗ್ಲ ಮಾಧ್ಯಮ ಶಾಲೆಯ ಕಛೇರಿಯ ಬಾಗಿಲಿನ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ಡ್ರಾವರಿನಲ್ಲಿದ್ದ ಶಾಲಾ ಶುಲ್ಕದ ಬಾಬ್ತು ನಗದು ಸೇರಿದಂತೆ ಇತರ ಉದ್ದೇಶಗಳಿಗೆ ಇರಿಸಿದ್ದ ಒಟ್ಟು 79,020 ರೂ. ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಶಾಲೆಯ ಕೋ ಆರ್ಡಿನೇಟರ್ ಹಂಝ ಅಹ್ಮದ್ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಎರಡು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಕಿನ್ನಿಗೋಳಿ ಮುಖ್ಯ ರಸ್ತೆಯ ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ನ ಹೊರಗಿನ ಕಬ್ಬಿಣದ ಬಾಗಿಲು ಹಾಗೂ ಪ್ರಾಂಶುಪಾಲರ ಕಚೇರಿಯ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ಏಳು ಕಪಾಟುಗಳನ್ನು ಹಾಗೂ ಕಂಪ್ಯೂಟರ್ ಡ್ರಾವರ್‍ಗಳನ್ನು ಜಾಲಾಡಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಸ್ಥಳಕ್ಕೆ ಮೂಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published.

error: Content is protected !!