ಉಡುಪಿ : ನ.12 ರಂದು ಮಟಪಾಡಿಯಲ್ಲಿ ಸಾಂಪ್ರದಾಯಿಕ ಪೌರಾಣಿಕ ಯಕ್ಷಗಾನ ಬಯಲಾಟ

ಉಡುಪಿ ನ.9(ಉಡುಪಿ ಟೈಮ್ಸ್ ವರದಿ) : ಮಟಪಾಡಿಯ ಶ್ರೀನಂದಿಕೇಶ್ವರ ಯಕ್ಷಗಾನ ಕಲಾಮಂಡಳಿ ವತಿಯಿಂದ ಸಾಂಪ್ರದಾಯಿಕ ಪೌರಾಣಿಕ ಯಕ್ಷಗಾನ ಬಯಲಾಟ ನ.12ರ ರಂದು ಮಟಪಾಡಿಯಲ್ಲಿ ಆಯೋಜಿಸಿದೆ ಎಂದು ಕಲಾಮಂಡಳಿಯ ಗೌರವ ಸಲಹೆಗಾರರಾದ ಸರ್ಪು ಸದಾನಂದ ಪಾಟೀಲ್ ತಿಳಿಸಿದ್ದಾರೆ.

ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 30-40 ವರ್ಷಗಳ ಹಿಂದೆ ಕಂಡುಬರುತಿದ್ದ ಸಂಪ್ರದಾಯ ಶೈಲಿಯ ವೇಷಭೂಷಣ ಹಾಗೂ ಕುಣಿತಗಳ ಸಹಿತ ನಡು ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ರಾತ್ರಿ 8ಗಂಟೆಯಿಂದ ಮಟಪಾಡಿ-ಹಾರಾಡಿ ಸಾಂಪ್ರದಾಯಿಕ ಶೈಲಿಯಲ್ಲಿ ಮಾಯಾಪುರಿ ಮಹಾತ್ಮ- ವೀರಮಣಿ ಕಾಳಗ, ಕರ್ಣಾರ್ಜುನ ಕಾಳಗ- ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರಸಂಗಗಳನ್ನು ಆಡಿತೋರಿಸಲಿದ್ದಾರೆ ಎಂದು ಹೇಳಿದರು.

ಮಟಪಾಡಿಯಲ್ಲಿರುವ ಶ್ರೀನಂದಿಕೇಶ್ವರ ಯಕ್ಷಗಾನ ಕಲಾಮಂಡಳಿಯ ರಾಷ್ಟ್ರಪ್ರಶಸ್ತಿ ವಿಜೇತ, ಯಕ್ಷಗಾನ ಗುರು ಮಟಪಾಡಿ ವೀರಭದ್ರ ನಾಯಕ್ ರಂಗ ಮಂಟಪದಲ್ಲಿ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಬಡಗುತಿಟ್ಟಿನ ವಿವಿಧ ಮೇಳಗಳಲ್ಲಿ ದುಡಿಯುವ ಅನುಭವಿ ಕಲಾವಿದರು, ಹಿಮ್ಮೇಳದವರು ಇಲ್ಲಿ ತಮ್ಮ ಸಂಪ್ರದಾಯದ ಶೈಲಿಯ ಹಾಡುಗಾರಿಕೆ ಹಾಗೂ ಕುಣಿತ, ಅಭಿನಯವನ್ನು ಪ್ರದರ್ಶಿಸಲಿದ್ದಾರೆ. ಇಂದಿನ ತಲೆಮಾರು ಅರಿಯದ ರಾಷ್ಟ್ರಪ್ರಶಸ್ತಿ ವಿಜೇತ ಹಾರಾಡಿ ರಾಮ ಗಾಣಿಗ, ಹಾರಾಡಿ ಕುಷ್ಟ ಗಾಣಿಗ, ಹಾರಾಡಿ ಮಹಾಬಲ ಗಾಣಿಗ ಮುಂತಾದವರ ಹಾರಾಡಿ ಶೈಲಿ ಹಾಗೂ ಮಟಪಾಡಿ ವೀರಭದ್ರ ನಾಯಕ್, ನಾರಾಯಣ ನಾಯಕ್, ಚಂದು ನಾಯಕ್, ಮುಕುಂದ ನಾಯಕ್ ಮುಂತಾದವರ ಮಟಪಾಡಿ ಶೈಲಿಯನ್ನು ಕಲಾವಿದರು ರಂಗದ ಮೇಲೆ ಮೂಡಿಸಲಿದ್ದಾರೆ. ಅದೇ ರೀತಿ ಹಿಂದಿನ ಕಲಾವಿದರು ಬಳಸುತ್ತಿದ್ದ ವೇಷಭೂಷಣವನ್ನು ಮತ್ತೆ ಇಲ್ಲಿ ಬಳಸಲಾಗುತ್ತಿದೆ. ಈಗಿನವರು ಬಳಸುವ ಥರ್ಮೋಕೋಲ್ ಕೇದಗೆ ಮುಂದಲೆ, ಮುಂಡಾಸು ಬದಲು ಹಿಂದಿನವರು ಬಳಸುತ್ತಿದ್ದ ಹುಲ್ಲಿನ ಅಟ್ಟೆಯ ಕೇದಗೆಮುಂದಲೆ, ಮುಂಡಾಸುಗಳನ್ನು ಕಿರೀಟಗಳನ್ನು, ಭುಜಕೀರ್ತಿ, ಎದೆಕಟ್ಟು, ವಡ್ಯಾಣಗಳನ್ನು ಮತ್ತೆ ಇಲ್ಲಿ ಕಲಾವಿದರು ಬಳಸಲಿದ್ದಾರೆ ಎಂದರು.

ಹೆರಂಜಾಲು ಗೋಪಾಲ ಗಾಣಿಗ, ಕಿಗ್ಗ ಹಿರಿಯಣ್ಮ ಆಚಾರ್ಯರಂಥ ಭಾಗವತರು, ರಾಮಕೃಷ್ಣ ಮಂದಾರ್ತಿ, ಶ್ರೀಕಾಂತ ಶೆಟ್ಟಿ ಎಡಮೊಗೆ ಮುಂತಾದ ಚಂಡೆವಾದಕರು, ಶ್ರೀಧರ ಭಂಡಾರಿ, ಎನ್.ಜಿ.ಹೆಗಡೆ ಮುಂತಾದ ಮದ್ದಲೆವಾ ದಕರು ಅಂದು ಇರಲಿದ್ದು, ರಾಜ್ಯಪ್ರಶಸ್ತಿ ಪುರಸ್ಕøತ ಕಲಾವಿದ ಏರೋಡಿ ಗೋವಿಂದಪ್ಪ, ಹಾರಾಡಿ ಸರ್ವೋತ್ತಮ ಗಾಣಿಗ, ಕೋಡಿ ವಿಶ್ವನಾಥ ಗಾಣಿಗ, ಅಜ್ರಿ ಗೋಪಾಲ ಗಾಣಿಗ, ಹಾರಾಡಿ ರಮೇಶ್ ಗಾಣಿಗರಂಥ ಕಲಾವಿದರು ಬಣ್ಣ ಬಳಿದು ಸಾಂಪ್ರದಾಯಿಕ ಶೈಲಿಯ ಯಕ್ಷಗಾನವನ್ನು ಪ್ರದರ್ಶಿಸಲಿದ್ದಾರೆ. 1965ರಲ್ಲಿ ಸ್ಥಾಪನೆಗೊಂಡ ಶ್ರೀನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿಯ ಸದಸ್ಯರು ಮೊದಲು ಯಕ್ಷಗಾನದ ನಡೆದಾಡುವ ವಿಶ್ವಕೋಶವೆನಿಸಿದ್ದ ಪ್ರಸಿದ್ಧ ಯಕ್ಷಗುರು ತೋನ್ಸೆ ಕಾಂತಪ್ಪ ಮಾಸ್ತರ್ ಅವರ ನಿರ್ದೇಶನದಲ್ಲಿ ಅವರ ನಂತರ ಅವರ ಪುತ್ರ ಯಕ್ಷಗಾನ ಗುರು ತೋನ್ಸೆ ಜಯಂತಕುಮಾರ್ ನಿರ್ದೇಶನದಲ್ಲಿ ಪ್ರತಿವರ್ಷ ಸಂಪ್ರದಾಯಬದ್ಧ ಯಕ್ಷಗಾನ ಪ್ರದರ್ಶನ ನೀಡುತ್ತಿದೆ ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಗೌರವಾಧ್ಯಕ್ಷ ಚಂದ್ರಶೇಖರ ಕಲ್ಕೂರ, ಅಧ್ಯಕ್ಷ ಪ್ರಭಾಕರ ಆಚಾರ್ಯ, ಮಟಪಾಡಿ, ಮಾಜಿ ಅಧ್ಯಕ್ಷ ಸ್ಯಾಮ್ಸನ್ ಸಿಕ್ವೇರಾ, ಶರೂನ್ ಸಿಕ್ವೇರಾ ಹಾಗೂ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!