ಎಸ್.ಡಿ.ಎಮ್ ಆಯುರ್ವೇದ ಕಾಲೇಜು ವತಿಯಿಂದ “ಏಕತೆಗಾಗಿ ಓಟ”

ಉಡುಪಿ ನ.8 (ಉಡುಪಿ ಟೈಮ್ಸ್ ವರದಿ) : ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಏಕತೆಗಾಗಿ ಓಟ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಅವರ ಮಾರ್ಗದರ್ಶನದೊಂದಿಗೆ ಆಯೋಜಿಸಲಾದ ಏಕತಾ ಓಟ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಯೋಗೀಶ್ ಆಚಾರ್ಯ ಅವರು ಏಕತಾ ಸಂದೇಶ ನೀಡಿ, ‘ಎಲ್ಲಾ ಕಾರ್ಯಕ್ರಮಗಳಲ್ಲಿಯೂ ನನ್ನದು ಎಂಬ ಭಾವನೆಯೊಂದಿಗೆ ನಾವು ಎಲ್ಲಿಯವರೆಗೆ ಭಾಗಿಗಳಾಗುವುದಿಲ್ಲವೋ ಅಲ್ಲಿಯವರೆಗೆ ಏಕತೆ ಸಾಧ್ಯವಿಲ್ಲ’ ಎಂದು ಹೇಳಿದರು.

ಕಾಲೇಜಿನ ಆವರಣದಿಂದ ಆರಂಭಗೊಂಡ ಓಟವು ಗುಡ್ಡೆಅಂಗಡಿ ಇಮೇಜ್ ಎಂಪೈರ್ ವಸತಿ ಸಮುಚ್ಚಯದಲ್ಲಿ ಸಮಾವೇಶಗೊಂಡಿತು. ಡಾ. ವೀರ ಕುಮಾರ ಕೆ. ಅವರು ಸ್ವಯಂಸೇವಕರು ಹಾಗೂ ನೆರೆದಿದ್ದ ಸಾರ್ವಜನಿಕರಿಗೆ ಏಕತೆಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿ ಡಾ. ವಿದ್ಯಾಲಕ್ಷ್ಮಿ ಕೆ., ಸಹ ಪ್ರಾಧ್ಯಾಪಕರಾದ ಡಾ.ಮೊಹಮ್ಮದ್ ಫೈಸಲ್, ಡಾ. ಶ್ರೀನಿಧಿ ಧನ್ಯ, ಡಾ. ಅರ್ಹಂತ್ ಕುಮಾರ್ ಎ., ಡಾ. ಅರುಣ್ ಕುಮಾರ್, ಡಾ. ಮಹಾಲಕ್ಷ್ಮಿ ಎಮ್.ಎಸ್., ಉದ್ಯಾವರ ಗ್ರಾಮ ಪಂಚಾಯತು ಸದಸ್ಯ ಯೋಗೀಶ ಕೋಟ್ಯಾನ್, ಸತ್ಯವಿಕಾಸ್ ಜೈನ್ ಹಾಗೂ ಖುಷಿ, ಮಧುಸೂದನ್ ರೆಡ್ಡಿ, ಇಮೇಜ್ ಎಂಪೈರ್ ವಸತಿ ಸಮುಚ್ಚಯದ ನಿವಾಸಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!