ಉಡುಪಿ : ಕಾಂಗ್ರೆಸ್ ನವರಿಗೆ ಹಿಂದೂಗಳನ್ನು ಕಂಡರೆ ಆಗೋದಿಲ್ಲ: ಸಚಿವ ಸುನಿಲ್ ಕುಮಾರ್

ಉಡುಪಿ ನ.8 (ಉಡುಪಿ ಟೈಮ್ಸ್ ವರದಿ): ಕಾಂಗ್ರೆಸ್ ನವರಿಗೆ ಹಿಂದೂಗಳನ್ನು ಕಂಡರೆ ಆಗೋದಿಲ್ಲ: ಕಾಂಗ್ರೆಸ್ ಹಿಂದಿನಿಂದಲೂ ಹಿಂದೂ-ಹಿಂದುತ್ವವನ್ನು ಅಪಮಾನ ಮಾಡುವ ಕೆಲಸ ನಿರಂತರವಾಗಿ ಮಾಡುತ್ತಾ ಬರುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಟೀಕಿಸಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹುಟ್ಟಿದಾಗಿನಿಂದ ಇಂದಿನ ತನಕ ಹಿಂದೂ, ಭಾರತೀಯತೆಯ ಮೇಲೆ ಹಲವು ಬಾರಿ ಅವಮಾನ ಮಾಡುವಂತಹ ಕಾರ್ಯವನ್ನು ನಿರಂತರ ಮಾಡುತ್ತಾ ಬಂದಿದೆ. ನೆಹರು ಅವರು ಅವತ್ತಿನ ಕಾಲಘಟ್ಟದಲ್ಲಿ ನನ್ನನ್ನು ಹಿಂದೂ ಎಂದು ಕರೆಯಬೇಡಿ ಬೇರೆ ಏನಾದರೂ ಕರೆಯಿರಿ ಎನ್ನುವಂತಹ ಮಾತನ್ನು ಹೇಳಿದ್ದರು. ಆ ಪರಂಪರೆ ಇವತ್ತಿಗೂ ಮುಂದು ವರೆದಿದೆ. ಅವರಕಾಶ ಸಿಕ್ಕ ಎಲ್ಲಾ ಸಂದರ್ಭಗಳಲ್ಲಿ ಹಿಂದೂಗಳ ಬಗ್ಗೆ, ಹಿಂದುತ್ವದ ಬಗ್ಗೆ, ಭಾರತೀಯತೆಯ ಬಗ್ಗೆ ಕಾಂಗ್ರೆಸ್ ನಿರಂತರವಾದ ಅಪಮಾನವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಮಾಡುತ್ತಾ ಬಂದಿದೆ. ಹಿಂದುತ್ವಕ್ಕೆ ಧಕ್ಕೆ ಆದಾಗ ನಾವು ಎಲ್ಲಾ ಸಂದರ್ಭದಲ್ಲೂ ಎದ್ದು ನಿಂತಿದ್ದೇವೆ. ಇದೊಂದು ಜೀವನ ಪದ್ದತಿ, ಹಿಂದೂ ಎನ್ನುವಂತಹದ್ದು ನಮಗೆ ಸಿಕ್ಕ ಸಂಸ್ಕಾರ ಇದಕ್ಕೆ ಅಪಮಾನವಾದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸ್ವಾಭಿಮಾನಿ ಹಿಂದೂ ಅಭಿಯಾನವನ್ನು ನಾವು ಇಂದಿನಿಂದ ಆರಂಭ ಮಾಡುತ್ತಿದ್ದೇವೆ. ಇದನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಇದರ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತೇವೆ. ಇದನ್ನು ಎಲ್ಲರೂ ವಿರೋಧಿಸಬೇಕು. ಇದರ ವಿರುದ್ಧ ರಸ್ತೆಗೆ ಬರಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಖಂಡಿಸಬೇಕು ಎಂದು ಕರೆ ನೀಡಿದರು.

ಕಳೆದ ತಿಂಗಳು ಕಾಂಗ್ರೆಸ್ ನ ಹಿರಿಯ ನಾಯಕ ಶಿವರಾಜ್ ಪಾಟೀಲ್ ಅವರು ಭಗವದ್ಗೀತೆಯನ್ನು ಜಿಹಾದ್ ಗೆ ಹೋಲಿಕೆ ಮಾಡಿದ್ದರು. ಸಿದ್ದರಾಮಯ್ಯ ನವರಿಗೆ ತಿಲಕ ಕಂಡರೆ ಆಗೋದಿಲ್ಲ ಅನ್ನೋದನ್ನು ಅವರೇ ಸ್ವತಃ ವ್ಯಕ್ತಪಡಿಸಿದ್ದನ್ನು ನೋಡಿದ್ದೇವೆ. ಸಾವರ್ಕರ್ ಬಗ್ಗೆ ಅಪಮಾನ ಮಾಡಿದ್ದನ್ನು ಕೂಡಾ ನೋಡಿದ್ದೇವೆ. ಎಲ್ಲಾ ಕಾಲಘಟ್ಟದಲ್ಲಿ ಕಾಂಗ್ರೆಸ್ ಈ ತರಹದ ನಡವಳಿಕೆಯನ್ನು ಮತ್ತೆ ಮತ್ತೆ ಮಾಡುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ನವರಿಗೆ ಹಿಂದೂಗಳನ್ನು ಕಂಡರೆ ಆಗೋದಿಲ್ಲ. ಭಾರತೀಯತೆಯನ್ನು ಅವರು ಎಂದೂ ಒಪ್ಪಿಕೊಂಡಿಲ್ಲ ಎಂದಾಗುತ್ತದೆ. ಸಂಸ್ಕೃತಿ ಸಚಿವರಾಗಿದ್ದ ಲಲಿತಾ ನಾಯಕ್ ಅವರು ತೀರ್ಥವನ್ನೇ ತಗೋಬೇಡಿ ಎಂದು ಹೇಳುವ ಮಟ್ಟಕ್ಕೆ ಕಾಂಗ್ರೆಸ್ ನ ಮಾನಸಿಕತೆ ಬೆಳೆದಿದೆ. ಇದನ್ನು ಹೇಗೆ ಒಪ್ಪಿಕೊಳ್ಳೋಕಾಗುತ್ತೆ. ದೈವ ನರ್ತಕರಿಗೆ ಮಾಸಾಶನ ಕೊಟ್ಟಾಗ ಇಡೀ ಸಮಾಜ ಸ್ವಾಗತಿಸಿದೆ. ಆದರೆ ಲಲಿತಾ ನಾಯಕ್ ರವರ ಮುಖಾಂತರ ಕಾಂಗ್ರೆಸ್ ಅದನ್ನು ಸ್ವಾಗತಿಸುವುದಿಲ್ಲ ಎಂದಾದರೆ ಇದು ದೈವ ನರ್ತಕರಿಗೆ ಮಾಡುತ್ತಿರುವ ಅಪಮಾನವೋ ಅಥವಾ ಹಿಂದೂ ಚಟುವಟಿಕೆಗಳಿಗೆ ಮಾಡುತ್ತಿರುವ ಅಪಮಾನವೋ. ಇದೆಲ್ಲದನ್ನೂ ಕೂಡಾ ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಇನ್ನು ಸತೀಶ್ ಜಾರಕಿ ಹೊಳಿ ಹೇಳಿಕೆಗೆ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದ ಅವರು, ಜಾರಕಿಹೋಳಿ ಅವರೇ ನೀವು ಶಾಲೆಗೆ ಸೇರುವಾಗ ಹಾಗೂ ಚುನಾವಣೆ ಸ್ಪರ್ಧಿಸುವ ಸಂದರ್ಭದಲ್ಲಿ ಹಿಂದೂ ಪರಿಶಿಷ್ಟ ಜಾತಿ ಎಂದು ಸೇರಿಸಿಕೊಂಡಿದ್ದಿರೋ ಅಥವಾ ಅಶ್ಲೀಲ ಹಿಂದೂ ಎಂದು ಸೇರ್ಪಡೆ ಆಗಿದ್ದಿರೋ ಎಂದು ಪ್ರಶ್ನಿಸಿದರು. ಹಾಗೂ ಇವೆಲ್ಲವೂ ಸಾರ್ವಜನಿಕವಾಗಿ ಚರ್ಚೆ ಆಗಬೇಕಿದೆ. ಇದಕ್ಕೆ ಕಾಂಗ್ರೆಸ್ ಬಹಳ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!