ಬಿಜೆಪಿಯಿಂದ ಜಿಲ್ಲಾಡಳಿತದ ದುರುಪಯೋಗ-ಗೋಪಾಲ ಪೂಜಾರಿ ಆರೋಪ

ಕುಂದಾಪುರ, ನ.7 : ಬೈಂದೂರು ತಾಲೂಕಿನ ಮುಳ್ಳಿಕಟ್ಟೆಯಲ್ಲಿ ಹಮ್ಮಿಕೊಳ್ಳಲಾದ ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಡಳಿತ ಪಕ್ಷವು ಜಿಲ್ಲಾಡಳಿತವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆರೋಪಿಸಿದ್ದಾರೆ.

ಇಂದು ಮಧ್ಯಾಹ್ನ ಕುಂದಾಪುರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು, ಆಶಾ ಕಾರ್ಯಕರ್ತೆಯರನ್ನು, ವಿವಿಧ ಸ್ವಸಹಾಯ ಸಂಘಗಳನ್ನು ಒತ್ತಾಯಪೂರ್ವಕ ಕರೆತರುವ ಹೇಯ ಮನಸ್ಥಿತಿಗೆ ಬಿಜೆಪಿ ಮುಂದಾಗಿರುವುದು ನಾಚಿಕೆಗೇಡು. ಜಿಲ್ಲಾಡಳಿತವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡು ಈ ಸಮಾವೇಶ ನಡೆಸಲಾಗುತ್ತಿದ್ದು, ಬೈಂದೂರಿನ ಜನ ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದರು.

ಹಾಗೂ ನನ್ನ ಅವಧಿಯಲ್ಲಾದ ಕಾಮಗಾರಿಗಳನ್ನೂ ಬಿಜೆಪಿ ತನ್ನ ಪಟ್ಟಿಯಲ್ಲಿ ಸೇರಿಕೊಳ್ಳುವ ಮೂಲಕ ಸಮಾವೇಶ ಕ್ಷೇತ್ರದ ಅಭಿವೃದ್ದಿಯ ಕಾರ್ಯಕ್ರಮವಾಗದೇ ಬಿಜೆಪಿ ಚುನಾವಣಾ ಗಿಮಿಕ್ ಆಗಿದೆ. ಸೌಡ ಸೇತುವೆ ಹಾಗೂ ಕಬ್ಬಿನಾಲೆ ಸೇತುವೆಗೆ ಕಾಂಗ್ರೆಸ್ ಅವಧಿಯಲ್ಲಿಯೇ ಮಂಜೂರಾತಿಯಾಗಿತ್ತು ಎಂದ ಅವರು, ಕೊಡೇರಿ ಬಂದರಿಗೆ ಲಕ್ಷ್ಮೀನಾರಾಯಣರ ಅವಧಿಯಲ್ಲಿ 30 ಕೋಟಿ ಹಾಗೂ ನನ್ನ ಅವಧಿಯಲ್ಲಿ 33 ಕೋಟಿ ಅನುದಾನ ಬಿಡುಗಡೆಯಾಗಿತ್ತು ಅದೇ 63 ಕೋಟಿಯನ್ನು ತಮ್ಮ ಸಾಧನೆ ಎಂದು ಸತ್ಯವನ್ನು ಮರೆ ಮಾಚಲಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!