ಮೀನುಗಾರರಿಗೆ 5 ಸಾವಿರ ಮನೆ, ಹೆಚ್ಚುವರಿ ಸೀಮೆಎಣ್ಣೆ ನೀಡಲು ಬದ್ಧ- ಸಿಎಂ ಬೊಮ್ಮಾಯಿ

ಉಡುಪಿ ನ.7(ಉಡುಪಿ ಟೈಮ್ಸ್ ವರದಿ) : ರಾಜ್ಯದಲ್ಲಿಯೇ ಪ್ರಥಮಬಾರಿಗೆ ಕರಾವಳಿಯಲ್ಲಿ 100 ಹೈಸ್ಪೀಡ್ ಬೋಟ್ ಗಳಿಗೆ ಮಂಜುರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಕಾಪುವಿನಲ್ಲಿ ಇಂದು ನಡೆದ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಜೆಟ್ ನಲ್ಲಿ ಈ ಹಿಂದೆ ಘೋಷಿಸಿದಂತೆ ಇಲ್ಲಿನ ಬಂದರಿನ ಸಾಮಥ್ರ್ಯವನ್ನು ಹೆಚ್ಚಿಸಲು 8 ಬಂದರು ಅಭಿವೃದ್ಧಿಗಾಗಿ ಮಂಜುರಾತಿ ನೀಡಲಾಗಿದೆ. ಇದರ ಟೆಂಡರ್ ಪ್ರಕ್ರಿಯೆ ಕೂಡಾ ನಡೆದಿದೆ. ಇದರ ಜೊತೆಗೆ ಮೀನುಗಾರಿಕೆ ಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ 100 ಹೈ ಸ್ಪೀಡ್ ಬೋಡ್ ಗಳನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕರಾವಳಿಯಲ್ಲಿ ಮಂಜುರಾತಿ ಮಾಡುತ್ತಿದ್ದೇವೆ. ಈಗಾಗಲೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಇದೇ ವರ್ಷ ಮಂಜೂರಾತಿ ಸಿಗಲಿದೆ. ಹಾಗೂ 40 ಶೇಕಡಾ ಸಬ್ಸಿಡಿಯೂ ಸಿಗಲಿದೆ ಎಂದು ವಿವರಿಸಿದರು. ಅಲ್ಲದೆ ಮೀನುಗಾರರ ಸೀಮೆ ಎಣ್ಣೆ ಬೋಟ್ ಗಳನ್ನು ಪ್ರೆಟ್ರೋಲ್ ಗೆ ಅಪ್ ಗ್ರೆಡೇಶನ್ ಮಾಡಲು ಬೇಕಾಗುವ ಸಹಾಯವನ್ನು ಕೂಡಾ ಸರಕಾರ ಮಾಡಲಿದೆ. ಮೀನುಗಾರರಿಗೆ 5 ಸಾವಿರ ಮನೆಗಳನ್ನು ನಿರ್ಮಿಸಿ ಕೊಡಲಾಗುವುದರ ಜೊತೆಗೆ ಮೀನುಗಾರರಿಗೆ ಹೆಚ್ಚುವರಿ ಸೀಮೆ ಎಣ್ಣೆ ನೀಡಲು ಬದ್ಧವಿದ್ದೇವೆ. ಪಡಿತರ ಮೂಲಕ ಕುಚ್ಚಲಕ್ಕಿ ವಿತರಿಸಲಿದ್ದೇವೆ ಎಂದು ಹೇಳಿದರು.

5 ಬಿಲಿಯನ್ ಡಾಲರ್ ಆರ್ಥಿಕತೆಯ ಚಿಂತನೆಗೆ 1 ಬಿಲಿಯನ್ ಡಾಲರ್ ಕೊಡುಗೆಯನ್ನು ನೀಡಲು ಕರ್ನಾಟಕವು ಸಂಕಲ್ಪ ಮಾಡಿದೆ. ಅದಕ್ಕಾಗಿ ಆರ್ಥಿಕ ಬೆಳವಣಿಗೆ ಅಗಬೇಕು. ಈ ನಿಟ್ಟಿನಲ್ಲಿ ಅನೇಕ ಕೈಗಾರಿಕೆಗಳು ಕರಾವಳಿಯಲ್ಲಿ ಹೂಡಿಕೆ ಮಾಡಲಿದ್ದು, ಕರ್ನಾಟಕದ ಅಭಿವೃದ್ಧಿಗೆ ಕರಾವಳಿಯ ಕೊಡುಗೆ ಮಹತ್ವದ್ದಾಗಲಿದೆ. ರೈತರ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್, 4 ಸಾವಿರ ಹೆಚ್ಚುವರಿ ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಿರುವುದು, ಸಾಗರ್ ಮಾಲಾ ಯೋಜನೆಗಳ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಸಿ.ಆರ್.ಜೆಡ್ ನಿಯಮಾವಳಿಯಲ್ಲಿ ಬದಲಾವಣೆಗೆ ಬೇಡಿಕೆ ಇದ್ದು, ಅದಕ್ಕೆ ಅನುಮತಿ ಕೊಟ್ಟಿದ್ದಾರೆ. 3 ದಶಕಗಳ ಬೇಡಿಕೆ ಇದಾಗಿದ್ದು, ಕಡಲ ತೀರದ ಆರ್ಥಿಕತೆಗೆ ಇದು ವೇಗ ಕೊಡಲಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರಕಾರ ಪ್ರಧಾನಿ ಮೋದಿ ಅವರ ಯೋಜನೆಗಳಿಗೆ ಸರಕಾರದ ರೂಪದಲ್ಲಿ ಕೆಲಸ ಮಾಡುತ್ತಿದ್ದೇವೆ. ಡಬಲ್ ಇಂಜಿನ್ ಸರಕಾರದಲ್ಲಿ ಕೇಂದ್ರ ಸರಕಾರದ ಯೋಜನೆಗಳಿಗೆ ರಾಜ್ಯ ಸರಕಾರ ಸಹಕಾರ ಕೊಟ್ಟು ರಾಜ್ಯ ಸರಕಾರದ ಯೋಜನೆಗಳಿಗೆ ಕೇಂದ್ರದಿಂದ ಬೆಂಬಲ ಪಡೆದು. ಒಟ್ಟಾರೆ ಕರ್ನಾಟಕದ ಜನತೆಯ ಸಮಗ್ರ ಅಭಿವೃದ್ಧಿಗೆ ಬದ್ದರಿದ್ದೇವೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ದೂರದೃಷ್ಟಿ ಇರುವ ಕಾರ್ಯಕ್ರಮಗಳನ್ನು ಪ್ರದಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಕೊಂಕಣ ರೈಲ್ವೆ ವಿದ್ಯುದೀಕರಣಕ್ಕೆ ಬಿಜೆಪಿ ಕಾರಣ. ಗತಿ ಶಕ್ತಿ ಯೋಜನೆ ಮೂಲಕ ಬಂದರುಗಳನ್ನು ಮುಖ್ಯ ನಗರಗಳಿಗೆ ಜೋಡಿಸುವ ಕಾರ್ಯ ನಡೆದಿದೆ. 2 ತಿಂಗಳಿಗೊಮ್ಮೆ ಅದರ ಪ್ರಗತಿಯನ್ನು ಪ್ರಧಾನಿಯವರೇ ಪರಿಶೀಲಿಸುತ್ತಿದ್ದಾರೆ ಎಂದರು.

ಬಹಳ ದೊಡ್ಡ ಬಂಡವಾಳ ಬಂದಾಗ, ಬಹಳ ದೊಡ್ಡ ಆರ್ಥಿಕತೆ ಬೆಳೆದಾಗ ಈ ಬಾಗದ ಸಮಗ್ರ ಅಭಿವೃದ್ಧಿಯಾಗುತ್ತದೆ. ಅದರ ಒಟ್ಟು ಪರಿಣಾಮ ಕರ್ನಾಟಕದ ಅಭಿವೃದ್ಧಿಗೆ ಕರಾವಳಿಯ ಪಾಲು ಹೆಚ್ಚಾಗಲಿದೆ ಎಂಬ ನಿರೀಕ್ಷೆಯಿದೆ ಹಾಗೂ ಮುಂದಿನ ದಿನಗಳಲ್ಲಿಯೂ ರಾಜ್ಯದ ಜನತೆ ಡಬಲ್ ಇಂಜಿನ್ ಸರಕಾರಕ್ಕೆ ಬೆಂಬಲ ನೀಡಬೇಕು. ನರೇಂದ್ರ ಮೋದಿ ಹಾಗೂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಸರಕಾರಕ್ಕೆ ಜನರ ಬೆಂಬಲ ಇರಬೇಕು. ಯಡಿಯೂರಪ್ಪನವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಮ್ಮ ಸರಕಾರ ಮುಂದು ಹೋಗುತ್ತಿದೆ. ಅದೇ ರೀತಿ ವಿದ್ಯಾನಿಧಿ ಯೋಜನೆ ಅಡಿಯಲ್ಲಿ ರೈತರು, ಮೀನುಗರರು, ನೇಕಾರರು ಟ್ಯಾಕ್ಷಿ ಡ್ರೈವರ್ ದುಡಿಯುವ ವರ್ಗದವರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಿದ್ದೇವೆ. ಮೀನುಗಾರರ ಆರ್ಥಿಕ ಸಂಕಷ್ಟದಲ್ಲಿ ಅವರ ಮಕ್ಕಳ ವಿದ್ಯಾಭ್ಯಾಸದ ಹೊರೆ ಹೆಚ್ಚಾಗಿತ್ತು. ಆ ಭಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸುಮಾರು 2 ಲಕ್ಷ ಮಕ್ಕಳಿಗೆ ವಿದ್ಯಾನಿಧಿ ಸ್ಕಾಲರ್ ಶಿಪ್ ನ್ನು ಸರಕಾರ ನೀಡುತ್ತಿದೆ. 10 ಲಕ್ಷ ದಷ್ಟು ರೈತರು ಈಗಾಗಲೆ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಅಲ್ಲದೆ ದುಡಿಯುವ ವರ್ಗದ 20 ಲಕ್ಷಕ್ಕಿಂತ ಹೆಚ್ಚು ಮಕ್ಕಳಿಗೆ ವಿದ್ಯಾನಿಧಿ ನೀಡುತ್ತಿದ್ದೇವೆ. ಜನರ ಕಷ್ಟವನ್ನು ಅರ್ಥಮಾಡಿಕೊಂಡು ಅದಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಕೆಲಸ ಮಾಡುತ್ತಿದೆ. ಇದರ ಜೊತೆಗೆ 5000 ಮೀನುಗಾರರ ಮನೆಗಳಿಗೆ ಮಂಜುರಾತಿ ನೀಡಿದ್ದೇವೆ. ಕಾಪು ಕ್ಷೇತ್ರದಲ್ಲೂ ನೂರಾರು ಮನೆಗಳನ್ನು ಈ ವರ್ಷ ಕಟ್ಟಿಸಿಕೊಡುವ ಕೆಲಸ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ನರೇಂದ್ರ ಮೋದಿಜಿ ಪ್ರಧಾನಿಯಾದ ಮೇಲೆ 8 ವರ್ಷಗಳಲ್ಲಿ ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಇಡೀ ಜಗತ್ತೇ ಮೆಚ್ಚುವ ಮೋದಿಜಿ ಅವರು ಈ ದೇಶದ ರಥವನ್ನು ಮುನ್ನಡೆಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಮಂಗಳೂರು- ಉಡುಪಿಯ ಜನರು ಶಿಸ್ತಿನ ಜನರಾಗಿದ್ದು, ಬಹಳ ಕಾಲದಿಂದ ಬಿಜೆಪಿಯನ್ನು ಬೆಂಬಲಿಸುತ್ತ ಬಂದವರು. ರಾಜ್ಯದಲ್ಲಿ 10 ಲಕ್ಷ ಕೋಟಿಯಷ್ಟು ಹೂಡಿಕೆ ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಹಾಗೂ ಕಾಂಗ್ರೆಸ್ ಗೆಲುವಿನ ಭ್ರಮೆ ಹುಸಿಯಾಗಲಿದೆ. ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆ. ಬಿಜೆಪಿ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಮೋದಿಜಿ ಅವರಿಗೆ ಗೌರವ ತಂದು ಕೊಡಲಿದೆ. ಇದೇ 11ರಂದು ಮೋದಿಜಿ ಅವರ ಭೇಟಿ ವೇಳೆ ಮೂರ್ನಾಲ್ಕು ಲಕ್ಷ ಜನರು ಸೇರಲಿದ್ದಾರೆ. ನರೇಂದ್ರ ಮೋದಿ ಮುಂದೆ ರಾಹುಲ್ ಗಾಂಧಿ ಬಚ್ಚಾ ಇದ್ದ ಹಾಗೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ರಾಹುಲ್ ಹೋದಲ್ಲೆಲ್ಲ ಕಾಂಗ್ರೆಸ್ ಸೋಲಿಗೆ ಕೊಳ್ಳೇಗಾಲದ ಚುನಾವಣಾ ಫಲಿತಾಂಶವೇ ಉದಾಹರಣೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಸ್ತುವಾರಿ ಸಚಿವ ಎಸ್. ಅಂಗಾರ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್ ಅವರು ಉಪಸ್ಥಿತರಿದ್ದರು. ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published.

error: Content is protected !!