ಮಾಟಗಾತಿ ಎಂಬ ಶಂಕೆಯಲ್ಲಿ ಪೆಟ್ರೋಲ್ ಸುರಿದು ಮಹಿಳೆ ಕೊಲೆ -14 ಮಂದಿ ಅಂದರ್
ಪಾಟ್ನ ನ.7 : ಬಿಹಾರದ ಗಯಾ ಜಿಲ್ಲೆಯಲ್ಲಿ ಮಾಟಗಾತಿ ಎಂಬ ಅನುಮಾನದಿಂದ 45 ವರ್ಷದ ಮಹಿಳೆಯೊಬ್ಬರನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 302 ಮತ್ತು 436 ಅನ್ವಯ ಹಾಗೂ ಮಾಟ-ಮಂತ್ರ ಕಾಯ್ದೆಯ ನಿಬಂಧನೆಗಳಡಿ ಪ್ರಕರಣ ದಾಖಲಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಶೋಧ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಲ್ಲಿನ ಗ್ರಾಮದಲ್ಲಿ ಕಳೆದ ತಿಂಗಳು ಸುಧೀರ್ಘ ಅಸ್ವಸ್ಥತೆ ಬಳಿಕ ಪರಮೇಶ್ವರ್ ಭೂಯಿಯಾನ್ ಎಂಬಾತ ಮೃತಪಟ್ಟಿದ್ದ. ಇದಕ್ಕೆ ರೀಟಾ ದೇವಿ ಮಾಟ ಮಾಡಿದ್ದು ಕಾರಣ ಎನ್ನುವುದು ಮೃತ ವ್ಯಕ್ತಿಯ ಕುಟುಂಬದ ಆರೋಪವಾಗಿತ್ತು. ಶನಿವಾರ ಪರಮೇಶ್ವರ್ ಕುಟುಂಬದವರು ಜಾಖರ್ಂಡ್ ನಿಂದ ಭೂತೋಚ್ಚಾಟಕನನ್ನು ಕರೆಸಿದ್ದರು ಹಾಗೂ ಮಧ್ಯಾಹ್ನ ಪಂಚಾಯಿತಿ ನಡೆಸಲು ನಿರ್ಧರಿಸಲಾಗಿತ್ತು. ಹಿಂಸಾತ್ಮಕ ಸಂಘರ್ಷದ ಸಾಧ್ಯತೆ ಹಿನ್ನೆಲೆಯಲ್ಲಿ ಭೂತೋಚ್ಚಾಟಕ ಪಲಾಯನ ಮಾಡಿದ್ದ. ತಕ್ಷಣ ಪರಮೇಶ್ವರ್ ಕುಟುಂಬದವರು ಮಹಿಳೆಯ ಮನೆ ಮೇಲೆ ದಾಳಿ ಮಾಡಿದ್ದಾರೆ. ಹಾಗೂ ಮಹಿಳೆಯನ್ನು ಮನೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂಬುದಾಗಿ ಮಾಧ್ಯಮದಲ್ಲಿ ವರದಿಯಾಗಿದೆ.