ಟೈಲರ್ ಕ್ಷೇಮ ನಿಧಿ ಮಂಡಳಿ, ಭವಿಷ್ಯ ನಿಧಿ, ಮಾಸಿಕ ಪಿಂಚಣಿ ಯೋಜನೆಗೆ ಆಗ್ರಹ- ಸಿಎಂ ಗೆ ಮನವಿ

ಉಡುಪಿ ನ.7 (ಉಡುಪಿ ಟೈಮ್ಸ್ ವರದಿ) : ಟೈಲರ್ ಕ್ಷೇಮ ನಿಧಿ ಮಂಡಳಿ ರಚಿಸಿ ಆ ಮೂಲಕ ಭವಿಷ್ಯನಿಧಿ ಮತ್ತು ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ವತಿಯಿಂದ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಬಗ್ಗೆ ಮುಖ್ಯಮಂತ್ರಿವರಿಗೆ ಸಲ್ಲಿಸಿದ ಮನವಿಯಲ್ಲಿ, ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಎಂಬ ರಾಜ್ಯಮಟ್ಟದ ಸಂಘಟನೆಯನ್ನು 23 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ. ರಾಜ್ಯಾದ್ಯಂತ ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ಸ್ತ್ರೀ-ಪುರುಷ ಹೊಲಿಗೆ ಕೆಲಸಗಾರರಿಗೆ ಜೀವನ ಭದ್ರತೆಯನ್ನು ಒದಗಿಸಲು ಟೈಲರ್ಸ್ ಕ್ಷೇಮ ನಿಧಿ ಮಂಡಳಿಯನ್ನು ರಚಿಸುವಂತೆ ಕಳೆದ 22 ವರ್ಷಗಳಿಂದ ಮನವಿ ಹಾಗೂ ಶಾಂತ ರೀತಿಯ ಚಳುವಳಿಗಳ ಮುಖೇನ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಾ ಬಂದಿರುತ್ತೇವೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಟೈಲರ್ ಕ್ಷೇಮನಿಧಿ ಮಂಡಳಿ, ರಚಿಸುವ ಮೂಲಕ ಅಗತ್ಯ ಬೇಡಿಕೆಗಳಾದ ಭವಿಷ್ಯ ನಿಧಿ ಹಾಗೂ ಪಿಂಚಣಿ ಯೋಜನೆ ಜಾರಿ ಗೊಳಿಸಬೇಕು, ಹೊಲಿಗೆ ಕೆಲಸಗಾರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡುವುದು, ಹೊಲಿಗೆ ಕೆಲಸಗಾರರಿಗೆ ವಾಸಕ್ಕಾಗಿ ಮನೆ ನಿರ್ಮಾಣ ಅಥವಾ ದುರಸ್ತಿ ಮಾಡಲು ಹಾಗೂ ಹೊಲಿಗೆಯಂತ್ರ ಖರೀದಿಸಲು ಶೇಕಡ 4 ರಷ್ಟು ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡುವುದು. ಮತ್ತು ಹೊಲಿಗೆ ಕೆಲಸಗಾರರಿಗೆ ಆರೋಗ್ಯ ವಿಮೆಯನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆಗಳನ್ನು ಪರಿಶೀಲಿಸಿ ಮಸೂದೆಯಲ್ಲಿ ಸೂಕ್ತ ನಿರ್ಣಯವನ್ನು ರಚಿಸುವ ಮೂಲಕ ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!