ಸುಳ್ಳು ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಸುಳ್ಳು: ಸಿಎಂ ಬೊಮ್ಮಾಯಿ

ಉಡುಪಿ ನ.7( ಉಡುಪಿ ಟೈಮ್ಸ್ ವರದಿ) : ಸುಳ್ಳು ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಸುಳ್ಳು. ಸಿದ್ದರಾಮಯ್ಯ ಅವರು ತಾವೇ ಅಧಿಕಾರಕ್ಕೆ ಬರ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜನಸಂಕಲ್ಪ ಯಾತ್ರೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದ ಸಲುವಾಗಿ ಇಂದು ಉಡುಪಿಗೆ ಆಗಮಿಸಿದ ಅವರು ಆದಿ ಉಡುಪಿಯ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ…, ಜನರು ಸಂಕಲ್ಪ ಮಾಡಿದ್ದಾರೆ 2024 ಕ್ಕೆ ನಮ್ಮನ್ನು ಗೆಲ್ಲಿಸಲಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ತಾವೇ ಅಧಿಕಾರಕ್ಕೆ ಬರ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಅವರ ಆಡಳಿತ ಅವಧಿಯಲ್ಲಿ 220 ಕ್ಕೂ ಹೆಚ್ಚು ಶಾಸಕರು ಇದ್ದರು. 5 ವರ್ಷ ಆಡಳಿತ ಮಾಡಿದ್ದರು. ಆಗಲೂ ಹೀಗೆ ಹೇಳುತ್ತಿದ್ದರು.ಯಡಿಯೂರಪ್ಪನವರು ಮತ್ತು ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲಾರರು ಎಂದು ಹೇಳುತ್ತಿದ್ದರು. ಆದರೆ ಏನಾಯಿತು…? ಯಡಿಯೂರಪ್ಪ ಅವರೂ ಮುಖ್ಯಮಂತ್ರಿಯಾದರೂ ಕುಮಾರಸ್ವಾಮಿ ಅವರೂ ಮುಖ್ಯಮಂತ್ರಿಯಾದರು. ಬರೆದಿಟ್ಟುಕೊಂಡು ಬಿಡಿ, ಸಿದ್ದರಾಮಯ್ಯ ಹೇಳಿದ್ದು ಯಾವತ್ತೂ ಸತ್ಯ ಆಗಲ್ಲ. ಅಧಿಕಾರ ಮಾಡಿ ಕಾರ್ಯಕ್ರಮ ಕೊಟ್ಟಾಗಲೇ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ. ಅವರ ಒಡೆದು ಆಳುವ ನೀತಿ, ಸಮಾಜ ಒಡೆಯುವ ನೀತಿಗಳನ್ನು ಜನರು ಮರೆತಿಲ್ಲ. ಅವರು ಹೇಳಿದ್ದು ಯಾವತ್ತೂ ಸತ್ಯ ಆಗಿಲ್ಲ. ಹಾಗಾಗಿ ಅವರ ಮಾತಿಗೆಲ್ಲಾ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

ಈ ವೇಳೆ 50 ವರ್ಷದಲ್ಲಿ ಇಂತಹ ಭ್ರಷ್ಟ ಸರಕಾರವನ್ನು ನಾವು ನೋಡಿಲ್ಲ ಎಂಬ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಆರೋಪಗಳು ಸುಳ್ಳಿನಿಂದ ಕೂಡಿದೆ. ಸುಳ್ಳು ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಸುಳ್ಳು. 50 ವರ್ಷ ಅವರು ಮಾಡಿದ್ದು ಭ್ರಷ್ಟ ಸರಕಾರಾನೇ ಹೀಗಾಗಿ ಅವರ ಸರಕಾರ ಇಷ್ಟು ಮುಳುಗಿ ಹೋಗಿದೆ. ಕಾಂಗ್ರೆಸ್ ನಿಂದಲೇ ಭ್ರಷ್ಟಾಚಾರ ಆರಂಭವಾಗಿದೆ. ಅವರ ಕಾಲದಲ್ಲಿ ದಾಖಲೆ ರೂಪದಲ್ಲಿ ಭ್ರಷ್ಟಾಚಾರ ನಡೆದಿದೆ. ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಕೊಳ್ಳಲು ಈ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಈಗಾಗಲೇ ತನಿಖೆ ಆಗುತ್ತಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ತನಿಖೆ ಹೊರಬರಲಿದೆ ಎಂದು ತಿಳಿಸಿದರು.

ಕರಾವಳಿಯಲ್ಲಿ ಕಾಪುವಿನಿಂದ ಜನ ಸಂಕಲ್ಪ ಯಾತ್ರೆ .ಪ್ರತಿಯೊಂದು ಕ್ಷೇತ್ರಕ್ಕೂ ಭೇಟಿಕೊಟ್ಟು ಪಕ್ಷ ಸಂಘಟನೆ ಮತ್ತು ಜನಸ್ಪಂದನ ಮಾಡುತ್ತೇವೆ. ರಾಜ್ಯದಾದ್ಯಂತ ಕಾರ್ಯಕರ್ತರಲ್ಲಿ ಉತ್ಸಾಹ ಕಾಣುತ್ತಿದ್ದೇವೆ. ಇದೇ ವೇಳೆ ಜನ ಸಂಕಲ್ಪ ಯಾತ್ರೆ ಬಗ್ಗೆ ಮಾಹಿತಿ ನೀಡಿದ ಅವರು, ಕರಾವಳಿಯಲ್ಲಿ ಕಾಪುವಿನಿಂದ ಜನಸಂಕಲ್ಪ ಯಾತ್ರೆ ಪ್ರಾರಂಭವಾಗಿದೆ. ನಾಳೆಯಿಂದ ಗದಗ, ಬೆಳಗಾಂ, ಹಾವೇರಿಯಲ್ಲಿ ಸಂಕಲ್ಪ ಯಾತ್ರೆ ಮುಂದುವರಿಯುತ್ತದೆ. ಪ್ರತಿಯೊಂದು ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿ ಪಕ್ಷದ ಸಂಘಟನೆ ಜೊತೆಗೆ ಜನ ಜನಸ್ಪಂದನ ಮಾಡುತ್ತೇವೆ. ಈ ಯಾತ್ರೆಗೆ ಎಲ್ಲಾ ಕಡೆಯಿಂದಲೂ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ರಾಜ್ಯದಾದ್ಯಂತ ಕಾರ್ಯಕರ್ತರಲ್ಲಿ ಉತ್ಸಾಹ ಕಾಣುತ್ತಿದ್ದೇವೆ. ಈ ಯಾತ್ರೆ ಮುಗಿದ ಬಳಿಕ ಉತ್ತರ ಹಾಗೂ ದಕ್ಷಿಣ ಭಾಗದಿಂದ ಎರಡೂ ಕಡೆ ಎಲ್ಲಾ 224 ಕ್ಷೇತ್ರಗಳಲ್ಲಿಯೂ ರಥಯಾತ್ರೆ ಮಾಡಲಿದ್ದೇವೆ ಎಂದರು.

ಇನ್ನು ಕರಾವಳಿಯಲ್ಲಿ ಭತ್ತ ಕೊಯ್ಲು ಕಟಾವು ಕೇಂದ್ರದ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಮಾಹಿತಿ ನೀಡುವುದಾಗಿ ಹೇಳಿದರು.

Leave a Reply

Your email address will not be published.

error: Content is protected !!