ಎನ್.ಪಿ.ಎಸ್ ರದ್ದತಿಗೆ ಆಗ್ರಹಿಸಿ ನೌಕರರ ಸಂಘಟನೆಯಿಂದ ಸಚಿವ ಕೋಟ ಅವರಿಗೆ ಮನವಿ

ಉಡುಪಿ ನ.4 (ಉಡುಪಿ ಟೈಮ್ಸ್ ವರದಿ) : ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್ ನೌಕರ ಸಂಘಟನೆಯ ಉಡುಪಿ ಜಿಲ್ಲಾ ಫಟಕ ಮತ್ತು ಕುಂದಾಪುರ ತಾಲೂಕು ಘಟಕದ ವತಿಯಿಂದ ಇಂದು ಎನ್‍ಪಿಎಸ್ ರದ್ದತಿಗೆ ಆಗ್ರಹಿಸಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್ ನೌಕರ ಸಂಘಟನೆಯ ಉಡುಪಿ ಜಿಲ್ಲಾ ಫಟಕ ಮತ್ತು ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಆಗಿ ಎನ್ ಪಿ ಎಸ್ ರದ್ದು ಮಾಡುವ ಬಗ್ಗೆ ಚರ್ಚಿಸಿದರು. ಹಾಗೂ ಎನ್ ಪಿ ಎಸ್ ರದ್ದತಿಯಿಂದ ಸರಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. ಸುಮಾರು 6 ಲಕ್ಷ ಎನ್ ಪಿ ಎಸ್ ನೌಕರರ ಸರಕಾರದ ವಂತಿಗೆ ಶೇ. 14 ಒಟ್ಟು ಸೇರಿ ಪ್ರತಿ ತಿಂಗಳು ಸಾವಿರಾರು ಕೋಟಿ ರೂಪಾಯಿ ಷೇರು ಮಾರುಕಟ್ಟೆ ಪಾಲಾಗುವುದನ್ನು ತಪ್ಪಿಸಿ ಸರಕಾರದ ಜನಪ್ರಿಯ ಯೋಜನೆಗಳ ಅನುಷ್ಟಾನಕ್ಕೆ ಬಳಸಿಕೊಳ್ಳಬಹುದು ಎಂದು ಮನವರಿಕೆ ಮಾಡಿದರು.
ಹಾಗೂ ಈಗಾಗಲೇ ಐದು ರಾಜ್ಯಗಳು ಎನ್.ಪಿ.ಎಸ್ ರದ್ದುಮಾಡಿವೆ. ಎನ್.ಪಿ.ಎಸ್ ವ್ಯಾಪ್ತಿಗೆ ಬಂದು ನಿವೃತ್ತಿ ಹೊಂದಿದ ಕುಟುಂಬಗಳು ಬೀದಿ ಪಾಲಾಗಿತ್ತಿದೆ. ರಾಜ್ಯಾಧ್ಯಕ್ಷರಾದ ಶ್ರೀ ಶಾಂತಾರಾಮ್ ನೇತೃತ್ವದಲ್ಲಿ ಒ.ಪಿ.ಎಸ್ ಸಂಕಲ್ಪಯಾತ್ರೆ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ಶಾಸಕರು, ಸಚಿವರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಯವರಿಗೆ ಮನವಿ ಸಲ್ಲಿಸಲಾಗುತ್ತಿದೆ. ಅಲ್ಲದೆ ಎನ್.ಪಿ.ಎಸ್ ರದ್ದತಿಯ ಆಗ್ರಹದ ತೀರ್ವತೆಯ ಬಗ್ಗೆ. ನಮ್ಮ ಜಿಲ್ಲೆಯಲ್ಲಿ ಪಂಜಿನ ಮೆರವಣಿಗೆ ಮೂಲಕ ಎನ್.ಪಿ.ಎಸ್ ಕರಾಳತೆಯನ್ನು ನೌಕರರು ವ್ಯಕ್ತಪಡಿಸಿರುವುದನ್ನು ಸಚಿವರ ಗಮನಕ್ಕೆ ತಂದರು.

ಇನ್ನು ಡಿಸೆಂಬರ್ 19 ರಿಂದ ಮಾಡು ಇಲ್ಲವೇ ಮಡಿ ಎಂಬ ಅನಿರ್ದಿಷ್ಟಾವಧಿ ಹೋರಾಟ ನಡೆಯಲಿದೆ. ಇದರ ಪೂರ್ವದಲ್ಲಿ ಮುಖ್ಯಮಂತ್ರಿಯವರಿಗೆ ಎನ್.ಪಿ.ಎಸ್ ರದ್ದತಿ ಬಗ್ಗೆ ಒತ್ತಡ ತರುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು. ಇದಕ್ಕೆ ಸಕಾರತ್ಮಕವಾಗಿ ಸ್ಪಂದಿಸಿ ಮಾನ್ಯ ಸಚಿವರು ಹಳೆ ಪಿಂಚಣಿ ಬಗ್ಗೆ ಸದನದಲ್ಲಿ ಅನೇಕ ಚರ್ಚೆಗಳಾಗಿದ್ದು, ಪೂರಕವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಾಘವ ಶೆಟ್ಟಿ, ತಾಲೂಕು ಅಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿ, ಮೆಸ್ಕಾಂನ ರಾಘವೇಂದ್ರ , ಭರತ್ ರಾಜ್ ಶೆಟ್ಟಿ , ಅರಣ್ಯ ಇಲಾಖೆಯ ರವಿ , ಪದಾಧಿಕಾರಿಗಳು, ಎನ್ ಪಿ ಎಸ್ ನೌಕರರರು ಜೊತೆಗಿದ್ದರು.

Leave a Reply

Your email address will not be published. Required fields are marked *

error: Content is protected !!