ತುಮಕೂರಿನ ಆಸ್ಪತ್ರೆಯಲ್ಲಿ ಬಾಣಂತಿ-ಮಕ್ಕಳ ಸಾವು: ನಾಲ್ವರ ಅಮಾನತು, ಕ್ರಿಮಿನಲ್ ಮೊಕದ್ದಮೆಗೆ ಆರೋಗ್ಯ ಇಲಾಖೆ ನಿರ್ಧಾರ

ಬೆಂಗಳೂರು ನ.4 : ತುಮಕೂರಿನ ಆಸ್ಪತ್ರೆಯಲ್ಲಿ ನಡೆದ ಬಾಣಂತಿ ಹಾಗೂ ಅವಳಿ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಸೇರಿದಂತೆ ನಾಲ್ವರನ್ನು ಅಮಾನತುಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಘಟನೆಗೆ ಸಂಬಂಧಿಸಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾದ ತಕ್ಷಣ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಆಸ್ಪತ್ರೆಯ ಪ್ರಸೂತಿ ತಜ್ಞೆ ಹಾಗೂ ಮೂವರು ಶುಶ್ರೂಶಕರನ್ನು ಅಮಾನತಿನಲ್ಲಿಟ್ಟು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆ. ಇನ್ನು ಮುಂದೆ ಇಂಥ ಅವಘಡಕ್ಕೆ ಕಾರಣವಾಗುವ ವೈದ್ಯ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಜತೆಗೆ ಎಲ್ಲಾ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ರವಾನಿಸಲಾಗಿದ್ದು, ತುರ್ತು ಆರೋಗ್ಯ ಸೇವೆ ಸಂದರ್ಭದಲ್ಲಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳನ್ನು ಪರಿಶೀಲಿಸುತ್ತಾ ಕುಳಿತುಕೊಳ್ಳಬಾರದು. ದಾಖಲೆ ಪರಿಶೀಲನೆ ಮಾಡುವ ಅಗತ್ಯವಿಲ್ಲ. ಆರೋಗ್ಯ ಸೇವೆ ನೀಡುವಾಗ ರೋಗಿಯ ರಾಷ್ಟ್ರೀಯತೆ, ಜಾತಿ, ವರ್ಗ, ಆರ್ಥಿಕ ಪತಿಸ್ಥಿತಿ ಅವಲೋಕನ ಮುಖ್ಯವಲ್ಲ. ಇನ್ನು ಮುಂದೆ ಇಂಥ ಘಟನೆಗೆ ಕಾರಣರಾಗುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

Leave a Reply

Your email address will not be published.

error: Content is protected !!