ಉದ್ಯಮಿ ರವಿ ಶೆಟ್ಟಿ ಮೂಡಂಬೈಲ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು ನ.3 (ಉಡುಪಿ ಟೈಮ್ಸ್ ವರದಿ): ಉದ್ಯಮಿ ಹಾಗೂ ಸಮಾಜ ಸೇವಕ ರವಿ ಶೆಟ್ಟಿ ಮೂಡಂಬೈಲ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರವಿ ಶೆಟ್ಟಿ ಮೂಡಂಬೈಲ್ ಅವರ ಸಮಾಜ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಈ ಬಗ್ಗೆ ಮಾತನಾಡಿರುವ ಅವರು “ನನ್ನ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ಇದು ಇನ್ನೂ ಹೆಚ್ಚಿನ ಸಮಾಜಸೇವೆಗೆ ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ.
ಮೂಡಂಬೈಲ್ ತಿಮ್ಮಪ್ಪ ಶೆಟ್ಟಿ ಮತ್ತು ದೋಣಿಂಜೆ ಗುತ್ತು ಸರೋಜಿನಿ ಶೆಟ್ಟಿ ದಂಪತಿಯ ಪುತ್ರನಾಗಿ ಬಂಟ್ವಾಳ ತಾಲೂಕಿನ ಮೂಡಂಬೈಲುನಲ್ಲಿ 1963 ಜು.20 ರಂದು ಜನಿಸಿದ ರವಿ ಶೆಟ್ಟಿ ಅವರು ಎಂಜಿನಿಯರಿಂಗ್ ಹಾಗೂ ಎಂಬಿಎ ಪದವೀಧರರಾಗಿದ್ದಾರೆ. ಭಾರತದಲ್ಲಿ ಹಲವಾರು ಪ್ರಮುಖ ಕಂಪನಿಗಳಲ್ಲಿ ಪ್ರತಿಷ್ಠಿತ ಹುದ್ದೆಗಳನ್ನು ನಿಭಾಯಿಸಿರುವ ರವಿಶೆಟ್ಟಿಯವರು ಕೆಲವು ವರ್ಷಗಳಿಂದ ಕತಾರ್ ನಲ್ಲಿ ಎಟಿಎಸ್ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕರ್ನಾಟಕ ಸಂಘ ಕತಾರ್, ತುಳುಕೂಟ ಕತಾರ್, ಬಂಟ್ಸ್ ಕತಾರ್ ಹಾಗೂ ಜಿಲ್ಲೆಯ ಹಲವು ಸಂಘಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಮಹಾಪೋಷಕರಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ರವಿಶೆಟ್ಟಿಯವರ ಜೀವನದ ಬಗ್ಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ರವಿತೇಜ ಎಂಬ ಪುಸ್ತಕವನ್ನು ಇತ್ತೀಚೆಗೆ ಪ್ರಕಟಿಸಿತ್ತು.
ಹೈದರಾಬಾದ್‍ನಲ್ಲಿ ಟಾಟಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾಗಲೇ ಇವರು ಎರಡು ಹೋಟೆಲ್‍ಗಳನ್ನು ಆರಂಭಿಸಿ ಉದ್ಯಮ ಕ್ಷೇತ್ರಕ್ಕೂ ಕಾಲಿರಿಸಿ ಭವಿಷ್ಯದ ಸಾಧಕರಾಗುವ ಲಕ್ಷಣ ತೋರಿದ್ದರು. ಮನಸ್ಸಿಗೆ ಒಪ್ಪುವಂಥ ಹಿತವಾದ ಮೃದು ಮಾತುಗಳಿಂದ ಅವರು ಅಸಂಖ್ಯ ಮಂದಿಯ ಗೌರವ, ಪ್ರೀತ್ಯಾದಾರಗಳಿಗೆ ಪಾತ್ರರಾಗಿದ್ದಾರೆ. ಮೊದಲ ಬಾರಿಗೆ ಯಕ್ಷಗಾನ ತಂಡವನ್ನು ಕತಾರ್‍ಗೆ ಕರೆಸಿಕೊಂಡು ಕಾರ್ಯಕ್ರಮ ಕೊಡಿಸಿದ ಹೆಮ್ಮೆ ಇವರಿಗೆ ಸಲ್ಲುತ್ತದೆ. ಇವರ ಎಟಿಎಸ್ ಕಂಪೆನಿಯ ಕಾರ್ಯಕ್ರಮವೊಂದರಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು. ಜತೆಗೆ ಊರಿನಿಂದ ಹೋಗುವ ನಾಟಕ ತಂಡಗಳಿಗೂ ಅವರು ನೀಡಿರುವ ಹಾಗೂ ನೀಡುತ್ತಿರುವ ಸಹಕಾರ ಮೆಚ್ಚತಕ್ಕದ್ದು. ಇವರು ಕೊಡುಗೈ ದಾನಿಯಾಗಿದ್ದು, ದೇವಸ್ಥಾನ, ಶಿಕ್ಷಣ ಸಂಸ್ಥೆ, ಸಾಮಾಜಿಕ ಸಂಸ್ಥೆ, ಸರಕಾರದ ವಿವಿಧ ಪರಿಹಾರ ನಿಧಿ, ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ಸಂಬಂಧಿ ವಿಷಯಗಳಿಗೆ ಹೀಗೆ ಎಷ್ಟೋ ಮಂದಿಗೆ ಅವರು ಸಹಕಾರ ನೀಡಿದ್ದಾರೆ.