ಉಡುಪಿ: ವಿವಿಧ ಶೈಕ್ಷಣಿಕ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ಎಬಿವಿಪಿ ಮುತ್ತಿಗೆ

ಉಡುಪಿ ನ.3 (ಉಡುಪಿ ಟೈಮ್ಸ್ ವರದಿ): ಎಬಿವಿಪಿ ವತಿಯಿಂದ 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಬಾಕಿಯಿರುವ ವಿದ್ಯಾರ್ಥಿ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಹಾಗೂ ಯುಯುಸಿಎಂಎಸ್ ತಂತ್ರಾಂಶವನ್ನು ಸರಿಪಡಿಸಿ ಫಲಿತಾಂಶವನ್ನು ಪ್ರಕಟಿಸುವಂತೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿ ಸಂಕೀರ್ಣದ ಸಮೀಪ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಪ್ರತಿಭಟನೆ ಬಳಿಕ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಈ ಮನವಿಯಲ್ಲಿ, ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿ ವರ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ತಮ್ಮ ಶಿಕ್ಷಣಕ್ಕೆ ವಿದ್ಯಾರ್ಥಿವೇತನದಿಂದ ಬರುವ ಹಣವನ್ನು ಪೂರಕವಾಗಿ ಬಳಸಿ ಕೊಳ್ಳುತ್ತಿದ್ದರು, ಆದರೆ ಈ ಬಾರಿ, ವಿದ್ಯಾರ್ಥಿವೇತನ, ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ಈ ತಂತ್ರಾಂಶದಲ್ಲಿ ವಿದ್ಯಾರ್ಥಿ ವೇತನ ಬಿಡುಗಡೆ ಆಗಿರುವುದಾಗಿ ನಮೂದಿಸಲಾಗಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆತಿರುವುದಿಲ್ಲ. ಈ ಕೂಡಲೇ ಸರಕಾರವು ಈ ವಿಷಯದ ಕುರಿತು ಗಮನವನ್ನು ಹರಿಸಿ ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿವೇತನದ ಹಣವನ್ನು ಬಿಡುಗಡೆಗೊಳಿಸಬೇಕಾಗಿ ಹಾಗೂ ಈ ವಿದ್ಯಾರ್ಥಿವೇತನದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆಯು ಸೂಕ್ತ ತನಿಖೆ ನಡೆಸಯವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.

ಎನ್‍ಇಪಿ ಜಾರಿಯಾದ ನಂತರ ಎಲ್ಲಾ ವಿಶ್ವವಿದ್ಯಾನಿಲಯಗಳು ಯುಯುಸಿಎಂಎಸ್ ತಂತ್ರಾಂಶವನ್ನು ಬಳಸಿ, ದಾಖಲಾತಿಯಿಂದ ಫಲಿತಾಂಶದವರೆಗೆ ಎಲ್ಲಾರೀತಿಯ ಮಾಹಿತಿಗಳನ್ನು ಇದರ ಮೂಲಕವೇ ನಮೂದಿಸಬೇಕಾಗಿದೆ. ಆದರೆ ಈ ತಂತ್ರಾಂಶದಲ್ಲಿರುವ ಕೆಲವು ಸಮಸ್ಯೆಗಳಿಂದಾಗಿ, ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಲು, ಬೇರೆಕಾಲೇಜಿಗೆ ವರ್ಗಾವಣೆ ಪಡೆಯಲು, ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿದೆ. ವಿಶ್ವವಿದ್ಯಾಲಯಗಳು ಸರಿಯಾದ ರೀತಿಯಲ್ಲಿ ಫಲಿತಾಂಶವನ್ನು ನೀಡದೆ ಇರುವುದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ವಿದ್ಯಾರ್ಥಿ ಸಮೂಹ ಎದುರಿಸುತ್ತಿದ್ದು ಈ ಕೂಡಲೇ ಅವುಗಳನ್ನು ಬಗೆಹರಿಸುವಂತೆ ಮನವಿ ಮಾಡಿಕೊಂಡಿದೆ. ಪ್ರತಿಭಟನೆಯಲ್ಲಿ ಎಬಿವಿಪಿ ಮಂಗಳೂರು ವಿಭಾಗ ಸಹ ಸಂಚಾಲಕ ಸುಮುಖ ಭಟ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ಪ್ರಮುಖ ಕಾರ್ಯಕರ್ತರಾದ, ಆಶಿಶ್ ಶೆಟ್ಟಿ, ಗಣೇಶ್, ನಿರಂಜನ್, ಗಿರಿಧರ್, ಪ್ರಜ್ವಲ್, ಶ್ರೀವತ್ಸ, ಕಿಶೋರ್, ವಿದ್ಯಾರ್ಥಿನಿಯರಾದ ವಿನೋದಾ, ಶಾರ್ವರಿ ಸೇರಿದಂತೆ ಬೃಹತ್ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!