ಉಡುಪಿ: ನ.6 ರಂದು ಕಾರ್ಕಳದಲ್ಲಿ ಉಡುಪಿ ಜಿಲ್ಲಾ ವಿಪ್ರ ಸಮ್ಮೇಳನ

ಉಡುಪಿ ನ.3 (ಉಡುಪಿ ಟೈಮ್ಸ್ ವರದಿ) : ಉಡುಪಿ ಜಿಲ್ಲಾವ್ಯಾಪ್ತಿಯ ವಿಪ್ರ ಕುಟುಂಬಗಳ ಸಮಗ್ರ ಕ್ಷೇಮಾಭಿವೃದ್ಧಿಯನ್ನು ಸಾಧಿಸಬೇಕಾಗಿದೆ ಎಂಬ ಧ್ಯೇಯದೊಂದಿಗೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನ.6 ರಂದು ಉಡುಪಿ ಜಿಲ್ಲಾ ವಿಪ್ರ ಸಮ್ಮೇಳನವನ್ನು ಕಾರ್ಕಳದಲ್ಲಿ ನಡೆಸಲು ಕಾರ್ಯಕಾರಿ ಸಮಿತಿಯಿಂದ ನಿರ್ಧರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಉಡುಪಿ ಇದರ ಅಧ್ಯಕ್ಷ ವೈ ಸುಧಾಕರ ಭಟ್ ಕಾರ್ಕಳ ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮಂಗಳೂರಿನ ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಎಂ. ಎಸ್ ಮಹಾಬಲೇಶ್ವರ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೈ.ಸುಧಾಕರ ಭಟ್ ಅವರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಸಮ್ಮೇಳನದಲ್ಲಿ ಶಾಸಕ ರಘುಪತಿ ಭಟ್, ಬೆಂಗಳೂರಿನ ರೇವಾ ಯುನಿವರ್ಸಿಟಿಯ ಮಾಜಿ ವೈಸ್ ಚಾನ್ಸ್‍ಲರ್ ಡಾ.ಎಸ್.ವೈ ಕುಲಕರ್ಣಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್, ಉಪಾಧ್ಯಕ್ಷ ನಟರಾಜ ಭಾಗವತ್, ಮಣಿಪಾಲ ತರಂಗ ವಾರಪತ್ರಿಕೆಯ ಸಂಪಾದಕಿ ಡಾ.ಯು.ಬಿ ರಾಜಲಕ್ಷ್ಮೀ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಾಗೂ ಸಮ್ಮೇಶನದ ಸಮಾರೋಪ ಸಮಾರಂಭದಲ್ಲಿ ಸ್ಮರಣ ಸಂಚಿಕೆ “ವಿಪ್ರಸ್ಪಂದನ” ಬಿಡುಗಡೆಗೊಳ್ಳಲಿದ್ದು, ಈ ಸಂದರ್ಭದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮಂಡಳಿಯ ನಿರ್ದೇಶಕ ಶಿವರಾಮ ಉಡುಪ, ರಾಜೇಶ್ ನಡ್ಯಂತಿಲ್ಲಾಯ, ವತ್ಸಲಾ ನಾಗೇಶ್ ಉಡುಪಿ ಜಿಲ್ಲಾ ದಾರ್ಮಿಕ ಪರಿಷತ್‍ನ  ಸದಸ್ಯ ವೇದ ಮೂರ್ತಿ ಶ್ರೀರಾಮ ಭಟ್ ಉಪಸ್ಥಿತರಿರಲಿದ್ದಾರೆ. ಎಂದು ಮಾಹಿತಿ ನೀಡಿದರು.  

ಸಂಘಟನೆಯು ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲೇ ಬಾರಿಗೆ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಸುಮಾರು 1,500 ರಿಂದ 3000 ವಿಪ್ರ ಬಾಂಧವರು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯ ಒಳಗಡೆ ಹಾಗೂ ಹೊರಗಡೆ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ನಮ್ಮ ವಿಪ್ರ ಸಹೋದರರು ಆದ್ಯತೆಯಿಂದ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತಾಗಬೇಕು. ಈ ಸಮ್ಮೇಳನದಲ್ಲಿ ನಮ್ಮ ಸಮಾಜದ ಅಭಿವೃದ್ಧಿಗೆ ಪೂರಕವಾದ ವಿಷಯಗಳನ್ನು ಚರ್ಚಿಸಿ ಸರಕಾರಕ್ಕೆ ಮನವಿ ನೀಡಲಾಗುವುದು. ನಮ್ಮ ಸಮಾಜದ ವಿವಿಧ ಸಮಸ್ಯೆಗಳ ಬಗೆಗಿನ ಸಂವಾದ, ವಿಚಾರಗೋಷ್ಠಿ ನಡೆಯಲಿದೆ, ಸಮ್ಮೇಳನದ ಅಂಗವಾಗಿ ಜಿಲ್ಲಾ ಬ್ರಾಹ್ಮಣ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭಾನ್ವಿತರಿಗಾಗಿ ಸಾಂಸ್ಕøತಿಕ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.

ಸಮ್ಮೇಳನದ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ವಿಪ್ರ ವಲಯಗಳು ಮಾಡಿರುವ ಸಮಾಜಮುಖಿ ಕಾರ್ಯಕ್ರಮಗಳ ಪಕ್ಷಿನೋಟವನ್ನು ಒದಗಿಸುವ ಕೆಲಸವಾಗಲಿದೆ. ಇದರ ಜೊತೆಗೆ ವಿಪ್ರಸ್ಪಂದನ ಶೀರ್ಷಿಕೆಯಡಿಯಲ್ಲಿ ನಮ್ಮ ಸಮಾಜಕ್ಕೆ ಅಗತ್ಯವಾಗಿರುವ ವಿಶೇಷಮಾಹಿತಿಗಳನ್ನು ಒದಗಿಸುವುದು. ಸಮ್ಮೇಳನದ ದಿನದಂದು ವಿಶೇಷ ವೈದ್ಯಕೀಯ ವಿಭಾಗದ ಚಿಕಿತ್ಸಾ ಸೌಲಭ್ಯವಿರುತ್ತದೆ. ವ್ಯವಹಾರಸ್ಥರ ವಿಪ್ರ ಬಂಧುಗಳ ವ್ಯಾಪಾರೀ ವ್ಯವಹಾರಗಳಿಗಾಗಿ ಹಾಗೂ ವಿಪ್ರ ಸಂಘಸಂಸ್ಥೆಗಳಿಂದ ಮಾಹಿತಿ ಒದಗಣೆಗಾಗಿ ವಿಶೇಷ ಮಳಿಗೆಗಳ ವ್ಯವಸ್ಥೆಯಿರುತ್ತದೆ. ಅಲ್ಲದೆ ಸಮ್ಮೇಳನದ ನೆನಪಿಗಾಗಿ ವಿಶೇಷ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ. ಹಿರಿಯ ಲೇಖಕ ಹಾಗೂ ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ ಅವರ ಸಂಪಾದಕತ್ವದಲ್ಲಿ ರೂಪುಗೊಳ್ಳುವ ಈ ಸಂಚಿಕೆ ವಿಪ್ರ ಸಮಾಜದ ಪಾಲಿಗೆ ಮಾರ್ಗದರ್ಶಕವಾಗಬಲ್ಲ ಮಹತ್ವದ ಲೇಖನಗಳು ಹಾಗೂ ವಿವಿಧ ವ್ಯವಹಾರ ಸಂಸ್ಥೆಗಳ ಬಗೆಗಿನ ಮಾಹಿತಿ ಹಾಗೂ ಜಾಹೀರಾತುಗಳನ್ನು ಒಳಗೊಂಡು ಸರ್ವಾಂಗ ಸುಂದರವಾಗಿ ಹೊರಬರಲಿದೆ ಎಂದು ತಿಳಿಸಿದರು. ಇದರ ಜೊತೆಗೆ ಈ ಸಮ್ಮೇಳನವನ್ನು ಒಂದು ಹಬ್ಬದಂತೆ-ಸಾಂಸ್ಕೃತಿಕ ಉತ್ಸವದಂತೆ ಆಚರಿಸಬೇಕು ಎಂಬುದು ನಮ್ಮ ಆಶಯ. ಸಮಸ್ತ ಸಮಾಜ ಬಾಂಧವರು ಈ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಈ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಎಸ್.ಕೃಷ್ಣಾನಂದ ಛಾತ್ರ, ಪ್ರಧಾನಕಾರದರ್ಶಿಯಾದ ಸಂದೀಪ್ ಮಂಜ ಉಡುಪಿ, ಉಡುಪಿ ತಾಲೂಕಿನ ಅಧ್ಯಕ್ಷರಾದ ಶ್ರೀ ಮಂಜುನಾಥ ಉಪಾಧ್ಯಾಯ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀನಿವಾಸ ಬಲ್ಲಾಳ್, ಮಾಧವ ಭಟ್, ಕಾರ್ಯದರ್ಶಿಗಳಾದ ನಾಗರಾಜ್ ಉಪಾಧ್ಯಾಯ, ಕೆ.ಎಸ್.ಕೇಶವ ರಾವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!