ಕುಂದಾಪುರ : ಯುವಕನ ಅಪಹರಣ ಪ್ರಕರಣವನ್ನು 24 ಗಂಟೆಗಳಲ್ಲಿ ಭೇದಿಸಿದ ಪೊಲೀಸರು
ಕುಂದಾಪುರ ನ.2 : ಕೋಟೇಶ್ವರದಲ್ಲಿ ನಡೆದ ಯುವಕನೋರ್ವನ ಅಪಹರಣ ಪ್ರಕರಣವನ್ನು ಕುಂದಾಪುರ ಪೊಲೀಸರು 24 ಗಂಟೆಗಳ ಒಳಗೆ ಭೇದಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂದಾಪುರ ತಾಲೂಕಿನ ಸಿದ್ದಾಪುರದ ಜನ್ಸಾಲೆ ಎಂಬಲ್ಲಿನ ಗೋವಿಂದ ಶೆಟ್ಟಿ ಎಂಬುವರ ಮಗ ಶಶಾಂಕ (21) ಅಪಹರಣಕ್ಕೊಳಗಾಗಿದ್ದ ಯುವಕ
ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ ಮೂಲದ ಕಿರಣ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಕಿರಣ್ ಹಾಗೂ ಶಶಾಂಕ್ ನಡುವೆ ಹಣಕಾಸಿನ ವ್ಯವಹಾರವಿತ್ತು ಎನ್ನಲಾಗಿದ್ದು, ಈ ಬಗ್ಗೆ ತನಿಖೆಯಿಂದಷ್ಟೆ ಸತ್ಯಾಂಶ ಹೊರಬೀಳಬೇಕಾಗಿದೆ.
ಶಶಾಂಕ್ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾನೆ. ಅ.31 ರಂದು ಬೆಳಿಗ್ಗೆ 8.30ಕ್ಕೆ ಕಾಲೇಜಿಗೆ ಹೋಗಿದ್ದ. ಬಳಿಕ 9.30 ರ ಸುಮಾರಿಗೆ ಶಶಾಂಕ ತನ್ನ ಮೊಬೈಲ್ ನಿಂದ ತಂದೆ ಗೋವಿಂದ ಶೆಟ್ಟಿಯವರಿಗೆ ಕರೆ ಮಾಡಿ ತನ್ನನ್ನು ಕೋಟೇಶ್ವರದ ಕೋಸ್ಟೆಲ್ ಕೌನ್ ಮಾಲ್ ಬಳಿಯಿಂದ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದು, 30 ಲಕ್ಷ ಹಣ ನೀಡುವಂತೆ ಒತ್ತಾಯಿಸಿ ಭಯ ಪಡಿಸಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಅಪಹರಿಸಿದ್ದಾನೆ ಎನ್ನಲಾದ ಆರೋಪಿಯು ನಾಪತ್ತೆಯಾದ ಶಶಾಂಕ್ ನ ತಂದೆಯೊಂದಿಗೆ ಮಾತನಾಡಿ ರೂ. 30 ಲಕ್ಷ ಹಣವನ್ನು ನೀಡಿ ಮಗನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದ ಎನ್ನಲಾಗಿದೆ.
ಘಟನೆ ನಡೆದು ಎರಡು ದಿನಗಳಾದರೂ ಮಗ ಮನೆಗೆ ಬರದೇ ಇರುವುದರಿಂದ ಗಾಬರಿಗೊಂಡ ಶಶಾಂಕ್ ತಾಯಿ ಕುಂದಾಪುರ ಠಾಣೆಯಲ್ಲಿ ನಿನ್ನೆ ಸಂಜೆ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಂದಾಪುರ ಪೊಲೀಸರು ಪ್ರಕರಣ ದಾಖಲಾಗಿ 24 ಗಂಟೆಗಳೊಳಗೆ ನಾಪತ್ತೆಯಾದ ಶಶಾಂಕ್ ಹಾಗೂ ಆರೋಪಿ ಹುಬ್ಬಳ್ಳಿ ಮೂಲದ ಕಿರಣನನ್ನು ಕುಷ್ಟಗಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.