ಬ್ರಹ್ಮಾವರ : ಅಪಘಾತ ಪ್ರಕರಣ: ಅಪರಾಧಿಗೆ 2.5 ವರ್ಷ ಜೈಲು ಶಿಕ್ಷೆ, 10 ಸಾವಿರ ದಂಡ ವಿಧಿಸಿದ ನ್ಯಾಯಾಲಯ
ಬ್ರಹ್ಮಾವರ ನ.2 (ಉಡುಪಿ ಟೈಮ್ಸ್ ವರದಿ) : ಕಳೆದ ವರ್ಷ ಫೆಬ್ರವರಿಯಲ್ಲಿ ಬ್ರಹ್ಮಾವರ ಹೆಬ್ರಿಯ ರಸ್ತೆಯ ಧಾರಣ-ಕಂಬಳ ಎಂಬಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾದ ಲಾರಿ ಚಾಲಕ ಆರೋಪಿಗೆ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ 2 ವರ್ಷ 6 ತಿಂಗಳುಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಮಂಗಳೂರಿನ ಅಬೂಬಕ್ಕರ್ (36) ಶಿಕ್ಷೆಗೊಳಗಾದ ಆರೋಪಿ.
ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಠಾಣೆಯ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ ಅವರು ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಬಳಿಕ ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ್ ಅವರು, ಆರೋಪಿತನಾದ ಅಬೂಬಕ್ಕರ್ ನ ವಿರುದ್ಧದ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತನಿಗೆ 2 ವರ್ಷ 6 ತಿಂಗಳುಗಳ ಕಾರಾಗೃಹದ ಜೈಲು ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ವಿಚಾರಣೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕರಾದ ಮೋಹಿನಿ ಕೆ. ಅವರು ವಾದವನ್ನು ಮಂಡಿಸಿದ್ದಾರೆ.
2021 ರ ಫೆ.28 ರಂದು ಸಂಜೆ ವೇಳೆ ಕಂಟೈನರ್ ಲಾರಿಯನ್ನು ಅದರ ಚಾಲಕ ಮಂಗಳೂರಿನ ಅಬೂಬಕ್ಕರ್ ಎಂಬಾತ ಹೆಬ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಸಂಜೆ 4:30 ರ ಸುಮಾರಿಗೆ ಧಾರಣ-ಕಂಬಳ ಎಂಬಲ್ಲಿ ಕಂಟೈನರ್ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯಲ್ಲಿ ತೀರಾ ತನ್ನ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು, ಅದೇ ರಸ್ತೆಯ ಪಶ್ಚಿಮದ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಕೃಷ್ಣ ಪುತ್ರನ್ ಎಂಬವರಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಹತೋಟಿ ತಪ್ಪಿ ರಸ್ತೆಯ ಪಶ್ಚಿಮದ ಬದಿಯ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೃಷ್ಣ ಪುತ್ರನ್ ಅವರು ಮೃತಪಟ್ಟಿದ್ದರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.