ಕ್ಷಮೆ ಕೇಳುವುದಾಗಿ ಕೊರಗಜ್ಜನ ಸನ್ನಿಧಿಗೆ ಕರೆದು ರಿಕ್ಷಾ ಚಾಲಕನಿಂದ ವ್ಯಕ್ತಿ ಮೇಲೆ ಹಲ್ಲೆ
ಶಂಕರನಾರಾಯಣ ನ.2 (ಉಡುಪಿ ಟೈಮ್ಸ್ ವರದಿ) : ಕ್ಷಮೆ ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬರ ಮೇಲೆ ತಲವಾರ್ ನಿಂದ ಹಲ್ಲೆ ಮಾಡಿರುವ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಚಕ್ತೇಬೇರು ಎಂಬಲ್ಲಿ ನಡೆದಿದೆ.
ಈ ಬಗ್ಗೆ ಹಲ್ಲೆಗೊಳ ಸಿದ್ದಾಪುರ ಗ್ರಾಮದ ಭಾಸ್ಕರ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು ಜನತಾ ಕಾಲೋನಿಯ ಗಣೇಶ ಸಿದ್ದಾಪುರ ಎಂಬಾತನ ಬಗ್ಗೆ ಈ ಹಿಂದೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ವಿಷಯದಲ್ಲಿ ನ.1 ರಂದು ಗಣೇಶನು, ಭಾಸ್ಕರ ಶೆಟ್ಟಿ ಅವರಿಗೆ ಕರೆ ಮಾಡಿ ನಾನು ಕೊರಗಜ್ಜನ ಸನ್ನಿಧಿಯಲ್ಲಿ ಈ ಹಿಂದೆ ನೀಡಿದ ದೂರಿಗೆ ಕ್ಷಮೆ ಕೋರುತ್ತೇನೆ, ಹೋಗಿ ಬರುವ ಬಾ ಎಂದು ಹೇಳಿರುತ್ತಾನೆ. ಅದರಂತೆ ಭಾಸ್ಕರ ಶೆಟ್ಟಿ ಅವರು ಸಿದ್ದಾಪುರ ಪೇಟೆಗೆ ಹೋಗಿ ಅಲ್ಲಿಂದ ಗಣೇಶನೊಂದಿಗೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಚಕ್ತೇಬೇರು ಎಂಬಲ್ಲಿಗೆ ಹೋಗಿದ್ದರು. ಅಲ್ಲಿ ಗಣೇಶನು ದೇವಸ್ಥಾನದ ಒಳಗಡೆ ಹೋಗಿ ಕ್ಷಮೆ ಕೇಳಿದಂತೆ ಮಾಡಿ ಬಳಿಕ ದೇವಸ್ಥಾನದ ಹೊರಗಡೆ ಬಂದು ಇವತ್ತು ನಿನ್ನ ಕಡಿಯುವುದೇ ಎಂದು ಹೇಳಿ, ಆತನ ಆಟೋರಿಕ್ಷಾದ ಒಳಗಡೆ ಇದ್ದ ತಲವಾರು ತೆಗೆದು ಭಾಸ್ಕರ ಶೆಟ್ಟಿ ಇವರನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರು ದಾಳಿ ನಡೆಸಿದ್ದನು. ಈ ವೇಳೆ ಭಾಸ್ಕರ ಅವರು ತಪ್ಪಿಸಿಕೊಂಡಾಗ ತಲವಾರು ಅವರ ಬಲಭುಜಕ್ಕೆ ತಾಗಿ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.