ಚಲಿಸುತ್ತಿದ್ದ ರೈಲಿನ ಶೌಚಾಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಬರೇಲಿ ನ.1 : ಅಮೃತಸರದಿಂದ ಹೊರಟ ಜನಸೇವಾ ಎಕ್ಸ್ ಪ್ರೆಸ್ ರೈಲಿನ ಶೌಚಾಲಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಕೊಳೆತ ಮೃತದೇಹ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಶಹಜಹಾನ್ ಪುರ ಜಿಲ್ಲೆಯ ರೋಝಾ ಸ್ಟೇಷನ್ ನಲ್ಲಿ ನಡೆದಿದೆ.
ಬಿಹಾರದ ಬನ್ ಮಂಖಿ ಜಂಕ್ಷನ್ ನಿಂದ 900 ಕಿಲೋಮೀಟರ್ ದೂರ ರೈಲು ಹೋಗುವವರೆಗೂ ಈ ಮೃತದೇಹ ಯಾರ ಗಮನಕ್ಕೂ ಬರಲಿಲ್ಲ ಎನ್ನಲಾಗಿದೆ. ಮುಚ್ಚಿದ ರೈಲು ಶೌಚಾಲಯದಿಂದ ಕೊಳೆತ ದೇಹದ ವಾಸನೆ ಬರುತ್ತಿದೆ ಎಂದು ಪ್ರಯಾಣಿಕರು ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಸರ್ಕಾರಿ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಕರುಣೇಶ್ ಚಂದ್ರ ಶುಕ್ಲಾ ಅವರು ರೈಲು ಸಿಬ್ಬಂದಿಯ ಜತೆಗೆ ಶೌಚಾಲಯದ ಬಾಗಿಲು ಒಡೆದು ನೋಡಿದಾಗ ಕೊಳೆತ ಶವ ಪತ್ತೆಯಾಗಿದೆ. ಐದು ಗಂಟೆ ನಿಲುಗಡೆ ಬಳಿಕ ಅಮೃತಸರಕ್ಕೆ ರೈಲು ತೆರಳಿತು.
ಮೃತ ದೇಹ ಕೊಳೆತು ಹೋಗಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಸಾವು ಸಂಭವಿಸಿರಬೇಕು. ಪ್ರಜ್ಞೆ ತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಸಾಧ್ಯತೆ ಇದ್ದು, ಯಾವುದೇ ದೈಹಿಕ ಗಾಯಗಳು ಕಾಣುತ್ತಿಲ್ಲ ಎಂದು ರೈಲ್ವೆ ಆಸ್ಪತ್ರೆಯ ಡಾ.ಸಂಜಯ್ ರಾಯತ್ ಹೇಳಿದ್ದಾರೆ.