ಉಡುಪಿ: ‘ಬಿಜೆಪಿ ಸದಾ ಚುನಾವಣೆಗೆ ಸಿದ್ದವಾಗಿಯೇ ಇರುತ್ತದೆ’ – ಸಚಿವ ಅಂಗಾರ

ಉಡುಪಿ, ನ.1 : ಚುನಾವಣೆಗೆ ಭಾರತೀಯ ಜನತಾ ಪಕ್ಷ ವಿಶೇಷ ಸಿದ್ಧತೆ ಏನು ಮಾಡಿಕೊಂಡಿಲ್ಲ ನಾವು ಸದಾ ಚುನಾವಣೆಗೆ ಸಿದ್ದರಾಗಿರುತ್ತೇವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಒತ್ತನ್ನು ಕೊಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಮತ್ತು ವಿವರಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು. ಹಾಗೂ “ಎರಡು ಮೂರು ದಿನದ ಒಳಗೆ ನಾಡದೋಣಿ ಮೀನುಗಾರರಿಗೆ ಸೀಮೆ ಎಣ್ಣೆ ಪೂರೈಕೆಯನ್ನು ಮಾಡುತ್ತೇವೆ. ಮೀನುಗಾರರಿಗೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಇಂಜಿನ್ ಪೂರೈಕೆ ಮಾಡುತ್ತೇವೆ. ಪೆಟ್ರೋಲ್ ಇಂಜಿನ್ ಬಳಸಿ ನಾಡ ದೋಣಿ ಮೀನುಗಾರಿಕೆಯನ್ನು ಮೀನುಗಾರು ಮಾಡಬೇಕು. ಕಡಿಮೆ ಸೀಮೆ ಎಣ್ಣೆಯನ್ನು ಬಳಸಬೇಕು ಪರಿಸರದ ಮಾಲಿನ್ಯ ತಡೆಯಬೇಕಾಗಿದೆ. ತಾತ್ಕಾಲಿಕವಾಗಿ ಆಗಿರುವ ಸಮಸ್ಯೆಯನ್ನು ಕೂಡಲೇ ಪರಿಹರಿಸುತ್ತೇವೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಇಂಜಿನ್ ಬಳಕೆಯನ್ನು ಹೆಚ್ಚು ಮಾಡುತ್ತೇವೆ” ಎಂದರು.

“ ಕರ್ನಾಟಕ ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಗೆ ಸಂಬಂಧಪಟ್ಟ ಹಾಗೆ ಮೊಟ್ಟ ಮೊದಲ ಕಾರ್ಯಗಾರವನ್ನು ಕರ್ನಾಟಕದಲ್ಲಿ ಆಯೋಜನೆ ಮಾಡಲಾಗಿದೆ. ಮೀನಿನಿಂದ ಬೇರೆ ಬೇರೆ ಉತ್ಪನ್ನಗಳನ್ನ ತಯಾರಿಸುವ ಬಗ್ಗೆ ಸಂಪೂರ್ಣ ಮೀನು ಕೃಷಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣವಾದ ಪ್ರೋತ್ಸಾಹವನ್ನು ಕೊಡಲಿದೆ. ಕರ್ನಾಟಕ ಕರಾವಳಿಯಲ್ಲಿ ಸಿಗುವ ಮೀನುಗಳನ್ನು ಮಾರುಕಟ್ಟೆ ಮಾಡುವ ಮತ್ತು ರಫ್ತು ಮಾಡುವ ಬಗ್ಗೆ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ. ಕೃತಕ ಮತ್ತು ನೈಸರ್ಗಿಕ ಮೀನುಗಾರಿಕೆಯ ಬಗ್ಗೆ ಕಾರ್ಯಗಾರದಲ್ಲಿ ಚರ್ಚೆಗಳನ್ನು ಮಾಡಲಾಗಿದೆ. ಸಿಹಿ ನೀರಿನ ಮೀನುಗಾರಿಕೆ ಕೃತಕ ಮೀನುಗಾರಿಕೆ ಬಗ್ಗೆ ಕೂಡ ಯೋಜನೆಗಳನ್ನು ಮಾಡಲಾಗಿದೆ. ವಿಶ್ವದಲ್ಲೇ ಭಾರತವನ್ನು ಅತಿ ಹೆಚ್ಚು ಮೀನು ಉತ್ಪಾದನೆ ಮಾಡುವ ಮತ್ತು ರಫ್ತು ಮಾಡುವ ದೇಶ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಚಿಂತನೆ ಇದೆ. ದೇಶದ ಎಲ್ಲಾ ಮೀನುಗಾರಿಕಾ ಸಚಿವರಿಗೆ ಪ್ರಧಾನಿ ಸೂಚನೆ ಕೊಟ್ಟಿದ್ದಾರೆ. ದೇಶದಲ್ಲೇ ಕರ್ನಾಟಕವನ್ನ ಮೀನುಗಾರಿಕೆ ಉತ್ಪಾದನೆ ಮತ್ತು ರಫ್ತು ವಿಚಾರದಲ್ಲಿ ದೇಶದಲ್ಲಿ ನಂಬರ್ ಒನ್ ಮಾಡಬೇಕು ಎಂಬ ಉದ್ದೇಶವನ್ನ ಇಟ್ಟುಕೊಂಡಿದ್ದೇವೆ. ಫಿಶ್ ಮಿಲ್ ಗಳಲ್ಲಿ ಮೀನು ಸಂಸ್ಕರಣೆ, ರಫ್ತು ಮಾಡುವ ಸಂದರ್ಭ ಬಹಳ ತ್ಯಾಜ್ಯಗಳು ಉಳಿಯುತ್ತವೆ. ತ್ಯಾಜ್ಯಗಳನ್ನ ಬಳಸಿ ಬಯೋಡಿಸೇಲ್ ಮಾಡುವ ಬಗ್ಗೆ ಚಿಂತನೆ ಇದೆ. ಮುಲ್ಕಿಯಲ್ಲಿರುವ ಮೀನುಗಾರಿಕಾ ಇಲಾಖೆಯ ಸಂಬಂಧ ಪಟ್ಟ ಜಮೀನಿನಲ್ಲಿ ಇದರ ಸಂಶೋಧನೆ ನಡೆಯುತ್ತದೆ. ಮುಂದಿನ ಜನವರಿ ತಿಂಗಳ ಒಳಗೆ ಈ ಪ್ರಾಜೆಕ್ಟ್ ಆರಂಭವಾಗುತ್ತದೆ” ಎಂದು ತಿಳಿಸಿದರು.

“ಮಲ್ಪೆ ಬಂದರಿನಲ್ಲಿ ನಾಲ್ಕು ಕಡೆ ಹೂಳೆತ್ತುವ ಬಗ್ಗೆ ಈಗಾಗಲೇ ಕಾರ್ಯಯೋಜನೆ ಮಾಡಿದ್ದೇವೆ. ಈ ಸಂಬಂಧ ಕೆಲವರು ನ್ಯಾಯಾಲಯದ ಮೆಟ್ಟಿಲೇರಿ ಇರುವುದರಿಂದ ಇದು ವಿಳಂಬವಾಗಿದೆ. ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಭೇಟಿಯಾಗುತ್ತೇನೆ ಎರಡು ಮೂರು ದಿನ ಇದರ ಒಳಗೆ ಈ ಬಗ್ಗೆ ತೀರ್ಮಾನವನ್ನು ಮಾಡುತ್ತೇವೆ” ಎಂದರು.

ಇದೇ ವೇಳೆ ಬಿಜೆಪಿಯಲ್ಲಿ ಈ ಬಾರಿ ಯುವಕರಿಗೆ ಆದ್ಯತೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು “ಬಿಜೆಪಿ ಟಿಕೆಟ್ ಹಂಚಿಕೆಯನ್ನು ತೀರ್ಮಾನ ಮಾಡಬೇಕಾಗಿರುವುದು ಪಕ್ಷ. ನಾನು ಮುದುಕನಾಗಿ ನಟನೆ ಮಾಡಲು ಸಿದ್ಧ. ಯುವಕನಾಗಬೇಕು, ಹುಡುಗ ಆಗಬೇಕು ಎಂದರೆ ನಾನು ಕ್ರಿಯಾಶೀಲನಾಗಿ ಓಡಾಟ ಮಾಡಲು ಸಿದ್ಧನಿದ್ದೇನೆ. ಅಧಿಕಾರ ಮತ್ತು ಓಟಿನ ಆಸೆಯನ್ನು ಇಟ್ಟುಕೊಂಡು ನಾವು ಯಾವುದೇ ಯೋಜನೆಯನ್ನು ಮಾಡುವುದಿಲ್ಲ ಪ್ರತಿಯೊಬ್ಬ ವ್ಯಕ್ತಿ ಮತ್ತು ರಾಜ್ಯದ ಅಭಿವೃದ್ಧಿ ಆಗಬೇಕು ಎಂಬುದು ರಾಜ್ಯ ಸರ್ಕಾರದ ಚಿಂತನೆ” ಎಂದರು.

Leave a Reply

Your email address will not be published. Required fields are marked *

error: Content is protected !!