ಶಂಕರನಾರಾಯಣ : ಟೆಂಪೋ ಗೆ ಲಾರಿ ಡಿಕ್ಕಿ-ಕ್ಲೀನರ್ ಸಾವು
ಶಂಕರನಾರಾಯಣ ನ.1 (ಉಡುಪಿ ಟೈಮ್ಸ್ ವರದಿ) : ಟೆಂಪೋಗೆ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನದ ಕ್ಲೀನರ್ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಹೆಗ್ಗೇರಿ ಕ್ರಾಸ್ ಬಳಿ ನಡೆದಿದೆ.
ನಿನ್ನೆ ಸಂತೋಷ್ ಪೂಜಾರಿ ಎಂಬವರು ತಮ್ಮ ಗೋಡ್ಸ್ ವಾಹನ ಟೆಂಪೋದಲ್ಲಿ ಬೀಜಾಡಿ ಎಂಬಲ್ಲಿದ ಟೈಲ್ಸ್ ಮತ್ತು ಗ್ರಾನೇಟ್ ನ್ನು ತುಂಬಿಸಿಕೊಂಡು ವಾಹನದ ಕ್ಲೀನರ್ ಹಾಗೂ ಲೋಡರ್ ಆಗಿದ್ದ ಶಿವ ಭಾದು ಷಾ ಎಂಬುವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಹೊರಟಿದ್ದರು. ಮಧ್ಯಾಹ್ನದ ವೇಳೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಹೆಗ್ಗೇರಿ ಕ್ರಾಸ್ ಎಂಬಲ್ಲಿ ವಾಹನವನ್ನು ತಿರುಗಿಸುತ್ತಿರುವಾಗ ಕುಂದಾಪುರ ಕಡೆಯಿಂದ ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಬಂದ ಲಾರಿ ಟೆಂಪೋಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಟೆಂಪೋದ ಹಿಂಬದಿ ಕುಳಿತಿದ್ದ ಶಿವ ಭಾದು ಷಾ ಅವರಿಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅಪಘಾತದ ರಭಸಕ್ಕೆ ಟೆಂಪೋದ ಹಿಂಬದಿ ಜಖಂಗೊಂಡಿದೆ. ಅಪಘಾತ ನಡೆಸಿದ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾನೆ ಎಂಬುದಾಗಿ ಸಂತೋಷ್ ಪೂಜಾರಿ ಎಂಬವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.