ಗಂಗೊಳ್ಳಿ: ದರೋಡೆಗೆ ಸಂಚು ರೂಪಿಸುತ್ತಿದ್ದ ಐವರು- ಪೊಲೀಸರನ್ನು ಕಂಡು ಎಸ್ಕೇಪ್
ಗಂಗೊಳ್ಳಿ ನ.1(ಉಡುಪಿ ಟೈಮ್ಸ್ ವರದಿ): ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪದ ಪೆಟ್ರೋಲ್ ಬಂಕ್ ಬಳಿ ದರೋಡೆಗೆ ಸಂಚು ರೂಪಿಸುತ್ತಿದ್ದ ಐವರ ಯೋಜನೆಯನ್ನು ಪೊಲೀಸರು ವಿಫಲಗೊಳಿಸಿದ್ದಾರೆ.
ಅ.30 ರ ತಡರಾತ್ರಿ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪದ ಪೆಟ್ರೋಲ್ ಬಂಕ್ ಬಳಿ 5 ಜನ ಅನುಮಾನಾಸ್ಪದ ವ್ಯಕ್ತಿಗಳು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ರೌಂಡ್ಸ್ ಕರ್ತವ್ಯದಲ್ಲಿದ್ದ ಗಂಗೊಳ್ಳಿ ಪೊಲಿಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ವಿನಯ ಎಂ. ಕೊರ್ಲಹಳ್ಳಿ ಅವರು ಇತರ ಸಿಬ್ಬಂದಿಗಳೊಂದಿಗೆ ಅ.31 ರ ನಸುಕಿನ ವೇಳೆ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಪೊಲೀಸರು ದೂರದಿಂದ ನೋದಿದಾಗ ರಾ.ಹೆ-66 ರ ರಸ್ತೆಯ ಬದಿಯಲ್ಲಿ ಒಂದು ಕಾರು ನಿಂತಿದ್ದು, ಅಲ್ಲಿ 5 ಜನರು ಇರುವುದು ಕಂಡುಬಂದಿದೆ. ಅವರಲ್ಲಿ ಮೂವರು ಮುಖಕ್ಕೆ ಕರ್ಚಿಪ್ ಕಟ್ಟಿಕೊಂಡಿದ್ದು, ಇಬ್ಬರು ತಮ್ಮ ಕೈಯಲ್ಲಿ ಮರದ ದೊಣ್ಣೆಗಳನ್ನು ಹಿಡಿದುಕೊಂಡು ನಿಂತಿರುವುದು ಕಂಡು ಬಂದಿರುತ್ತದೆ.
ಈ ವೇಳೆ ಪೊಲೀಸರನ್ನು ಕಂಡ ಅವರು ಸ್ಥಳದಲ್ಲಿಯೇ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಪರಾರಿಯಾದ ಆರೋಪಿಗಳ ಪೈಕಿ ಇಬ್ಬರ ಗುರುತು ಪತ್ತೆಯಾಗಿದ್ದು ಅವರನ್ನು ರಿಲ್ವಾನ್ ಯಾನೆ ರಿಝ್ವಾನ್ ಹಾಗೂ ಮೊಹಮ್ಮದ್ ಆಸಿಫ್ ಎಂದು ಗುರುತಿಸಲಾಗಿದೆ. ಅದರಂತೆ ಆರೋಪಿಗಳು ದರೋಡೆ ಮಾಡುವ ಉದ್ದೇಶದಿಂದ ಮಾರಕ ಆಯುಧಗಳನ್ನು ಹಿಡಿದುಕೊಂಡು ಸೇರಿರುವ ಸಾಧ್ಯತೆ ಇದೆ ಎಂಬುದಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.